ಅರಾಧನೆ ಪ್ರಜಾಪ್ರಭುತ್ವದ ದೊಡ್ಡ ಅಪಾಯ: ಡಾ.ನರಹಳ್ಳಿ ಬಾಲಸುಬ್ರಮಣ್ಯ

Update: 2019-05-26 14:35 GMT

ಬೆಂಗಳೂರು, ಮೇ.26: ಪ್ರಜಾಪ್ರಭುತ್ವದ ದೊಡ್ಡ ಅಪಾಯ ಅರಾಧನೆಯಾಗಿದ್ದು, ಕುವೆಂಪುನ್ನಾಗಲಿ, ಬೇರೆ ಯಾವುದೇ ಸಾಹಿತಿಯನ್ನಾಗಲಿ ಅರಾಧಿಸುವ ಅಗತ್ಯವಿಲ್ಲ ಎಂದು ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಮಣ್ಯ ಅಭಿಪ್ರಾಯಪಟ್ಟರು.

ರವಿವಾರ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಜನಶಕ್ತಿ ಕೇಂದ್ರ ಆಯೋಜಿಸಿದ್ದ ತಾವೇ (ನರಹಳ್ಳಿ ಬಾಲಸುಬ್ರಹ್ಮಣ್ಯ) ಬರೆದಿರುವ ‘ಕುವೆಂಪು ದರ್ಶನ ಮೀಮಾಂಸೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಎಲ್ಲವನ್ನೂ ಎಚ್ಚರಿಕೆಯಿಂದ ಹಾಗೂ ವಿಮರ್ಶತ್ಮಾಕವಾಗಿ ನೋಡುವ ಪ್ರಜ್ಞೆಯೊಂದನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಾಹಿತ್ಯ ಭರವಸೆಯ ಬೆಳಕು. ಎಂದೂ ಸಾಹಿತ್ಯ ನಿರಾಸೆಯನ್ನು ಮೂಡಿಸುವುದಿಲ್ಲ, ಎಂದೂ ನಮ್ಮನ್ನು ಹತಾಶೆಯ ಸ್ಥಿತಿಗೆ ತಳ್ಳುವುದಿಲ್ಲ. ನಿಜವಾದ ಸಾಹಿತ್ಯ ಭರವಸೆಯ ಬೆಳ್ಳಿ ಗೆರೆಯಂತೆ. ಈ ನಿಟ್ಟಿನಲ್ಲಿ ಕುವೆಂಪುರವರ ಸಮಗ್ರ ಸಾಹಿತ್ಯವನ್ನು ಓದಿದರೆ ಬದುಕಿನ ತಲ್ಲಣಗಳಿಗೆ ಉತ್ತರ ದೊರಕಿಸಿಕೊಳ್ಳಬಹುದು. ನಮ್ಮ ಮನಸ್ಸನ್ನು ಯಾವುದಕ್ಕೂ ಅಧೀನ ಮಾಡದೆ, ಸ್ವಾಯತತ್ತೆಯನ್ನು ಕಾಪಾಡಿಕೊಂಡರೆ ನಮ್ಮ ಕಾಲದ ಅನೇಕ ಬಿಕ್ಕಟ್ಟುಗಳಿಗೆ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

ಕುವೆಂಪು ವಿಚಾರದಲ್ಲಿ ಒಂದು ಕಡೆ ಭಜನೆ ಇನ್ನೊಂದೆಡೆ ನಿಂದನೆ ಮಾಡುತ್ತಿರುವುದನ್ನು ಗಮನಿಸಬಹುದು. ಕುವೆಂಪುರವರನ್ನು ನಾನು ಓದಿದ ಮೇಲೆ ಆತ್ಮಶಕ್ತಿಯನ್ನು ಪಡೆದುಕೊಂಡು, ನಮ್ಮ ಕಾಲದ ಎಲ್ಲ ಬಿಕ್ಕಟ್ಟುಗಳನ್ನು ಎದುರಿಸುವ ಆತ್ಮಬಲವನ್ನು ಗಿಟ್ಟಿಸಿಕೊಂಡೆ ಎಂದು ಅವರು ನೆನೆದರು.

ಶ್ರೇಷ್ಠ ಲೇಖಕರ ಕಾವ್ಯಗಳನ್ನು ಓದಿದಾಗ ಅದರಿಂದ ಅಂತಃಕರಣದ ಆದ್ರತೆ ಬತ್ತದಂತೆ ಕಾಪಾಡಬಹುದು. ಈಗ ಪ್ರೀತಿಯೇ ಮಾಯವಾಗಿದೆ. ಏನಿದ್ದರೂ ಕಪಟ, ಮೋಸ, ವಂಚನೆಯೇ ನಮ್ಮನ್ನು ಆಳುತ್ತಿದೆ. ಅಲ್ಲದೆ, ಇತ್ತೀಚಿಗೆ ಆತಂಕ ಉಂಟು ಮಾಡಿದ ಸಂಗತಿ ಎಂದರೆ ಮಂಡ್ಯವನ್ನು ಇಂಡಿಯಾದಂತೆ ಬಿಂಬಿಸಿ, ಅಲ್ಲಿನ ಶ್ರೇಷ್ಠ ಸಂಸ್ಕೃತಿಯನ್ನು ಮಾತ್ರ ತೋರಿಸದೇ ಇದ್ದದ್ದು ಎಂದು ಬೇಸರ ವ್ಯಕ್ತಪಡಿಸಿದರು.

ಸಮಕಾಲೀನ ವಸ್ತು ಜಗತ್ತನ್ನು ಆರಿಸಿಕೊಂಡು ಆ ಮೂಲಕ ಹೊಸ ಚರಿತ್ರೆಯನ್ನು ರೂಪಿಸುವ ಕುವೆಂಪು ಅವರ ಕಥಾ ಸಾಹಿತ್ಯ ಕೇವಲ ಕಥನ ವಿಲಾಸ ಮಾತ್ರವಲ್ಲ. ಚರಿತ್ರೆಯ ಪುನರ್ ರಚನೆಯಾಗಿದೆ. ಈ ನೆಲದ ಅಂತಃಸ್ವವನ್ನು, ಅಂತರ್ಗತವಾಗಿರುವ ಜನಸಮುದಾಯದ ಸೃಜನಶೀಲ ಪ್ರತಿಭೆಯನ್ನು ತಮ್ಮ ಕಥಾ ಸಾಹಿತ್ಯದಲ್ಲಿ ಅನಾವರಣಗೊಳಿಸುವ ಮೂಲಕ ನವ ವಸಾಹತುಶಾಹಿಗೆ ಸೃಜನಶೀಲ ನೆಲೆಯಲ್ಲಿ ಕುವೆಂಪು ಮುಖಾಮುಖಿಯಾಗುತ್ತಾರೆ ಎಂದು ವಿವರಿಸಿದರು.

ಹಿರಿಯ ವಿದ್ವಾಂಸ ಸಿ.ಎನ್.ರಾಮಚಂದ್ರನ್ ಮಾತನಾಡಿ, ಅಂಧಶ್ರದ್ಧೆ, ಮೌಢ್ಯ, ಭಾವಾವೇಷ ವೈಚಾರಿಕತೆ ಇಲ್ಲದ ಲೌಕಿಕ ಪ್ರಜ್ಞೆಯ ಶಿಕ್ಷಣ ಅವಶ್ಯ ಎಂದು ಪ್ರತಿಪಾದಿಸಿದ ಕುವೆಂಪು ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಅವರು ಸಾಹಿತ್ಯದ ಎಲ್ಲ ಪ್ರಬೇಧಗಳಲ್ಲೂ ತಮ್ಮನ್ನೂ ಅರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.

ಸಮಾಜದ ದೃಷ್ಠಿಕೋನದಲ್ಲಿ ರಚಿತವಾಗಿರುವ ಕಾದಂಬರಿಗಳು, ನಾಟಕಗಳು ಸೃಜನಶೀಲತೆಯಿಂದ ಕೂಡಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ. ಡಾ.ನರಹಳ್ಳಿ ಬಾಲಸುಬ್ರಮಣ್ಯ ಅವರು ಕುವೆಂಪು ದರ್ಶನ ಮೀಮಾಂಸೆಯಲ್ಲಿ 6 ಅಧ್ಯಾಯಗಳಿವೆ. ಅದರಲ್ಲಿ ವೈಜ್ಞಾನಿಕ ದೃಷ್ಠಿಕೋನ, ಸಂಸ್ಕೃತಿ ಕ್ರಾಂತಿ ಹಾಗೂ ಶಿಕ್ಷಣದ ಸೃಜನಾತ್ಮಕತೆ ಬಗ್ಗೆ ಉಲ್ಲೇಖದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯದಲ್ಲಿ ವೈಚಾರಿಕತೆ, ವಿಡಂಬನೆ ಸೇರಿದಂತೆ ಹಲವು ಪ್ರಕಾರಗಳು ಇಂದಿಗೂ ಜನಮಾನಸಲ್ಲಿ ಅಚ್ಚಳಿಯದೆ ಉಳಿದಿವೆ. ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಅವರು ನೀಡಿರುವ ಅಗಾಧ ಕೊಡುಗೆಯನ್ನು ಅವರ ಕೃತಿಗಳ ಮೂಲಕವೇ ಕಾಣಬಹುದಾಗಿದೆ. ಲೇಖಕರು ಈ ಬಗ್ಗೆ ತಮ್ಮ ಕೃತಿಯಲ್ಲಿ ಎಳೆ ಎಳೆಯಾಗಿ ಬಿಡಿಸಿದ್ದಾರೆ. ಈ ಕೃತಿಯ ಚಿಂತನೆಗಳು ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ಹೇಳಿದರು.

ಕಳೆದ ನಾಲ್ಕು ದಶಕಗಳ ಹಿಂದೆಯೇ ಕುವೆಂಪು ಅವರು ತ್ರಿಭಾಷಾ ಸೂತ್ರವನ್ನು ವಿರೋಧಿಸಿ ಕನ್ನಡದ ಏಕೀಕರಣಕ್ಕಾಗಿ ಶ್ರಮಿಸಿದರಲ್ಲದೆ ದ್ವಿಭಾಷಾ ಸೂತ್ರಕ್ಕೆ ಆದ್ಯತೆ ನೀಡುವಂತೆ ಆಗ್ರಸಿದ್ದರು. ಆಯಾ ಪ್ರಾಂತ್ಯಗಳ ಭಾಷೆಯಲ್ಲಿಯೇ ಆಡಳಿತ ಹಾಗೂ ಶಿಕ್ಷಣ ದೊರೆಯಬೇಕೆಂದು ಪ್ರತಿಪಾದಿಸಿದ್ದರು. ಅಂತಹ ಮಹಾನ್ ಚೇತನದ ಚಿಂತನೆಗಳನ್ನು ಡಾ.ನರಹಳ್ಳಿ ಬಾಲಸುಬ್ರಮಣ್ಯ ಮುಂದುವರೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ವಸಾಹತುಶಾಹಿ ಕಾಲಘಟ್ಟದಲ್ಲಿ ಶತ್ರು ಯಾರೆಂಬುದನ್ನು ತಿಳಿಯಬಹುದಿತ್ತು. ಆದರೆ, ವಸಾಹತು ಪೂರ್ವ ಘಟ್ಟದಲ್ಲಿ ಎಲ್ಲರೂ ವೇಷಾಧಾರಿಗಳೇ ಆಗಿರುವುದರಿಂದ ಶತ್ರು ಯಾರೆಂಬುದೇ ತಿಳಿಯುತ್ತಿಲ್ಲ.

- ರಾಜಶೇಖರ ಹಳೆಮನೆ, ಕತೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News