ನವಜಾತ ಶಿಶುಗಳನ್ನು ತ್ಯಜಿಸುವ ಪ್ರಕರಣ: ಕರ್ನಾಟಕದ ಸ್ಥಿತಿ ಆತಂಕಕಾರಿ

Update: 2019-05-27 04:11 GMT

ಬೆಂಗಳೂರು, ಮೇ 27: ಕರ್ನಾಟಕದಲ್ಲಿ ನವಜಾತ ಶಿಶುಗಳನ್ನು ಅನಾಥವಾಗಿ ಬಿಟ್ಟುಹೋಗುವ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. 2016ರಲ್ಲಿ 232 ಮಕ್ಕಳನ್ನು ಪ್ರಸವದ ಬಳಿಕ ಪೋಷಕರು ಬಿಟ್ಟುಹೋಗಿದ್ದರು. 2017ರಲ್ಲಿ ಈ ಪ್ರಮಾಣ 258ಕ್ಕೆ ಹೆಚ್ಚಿದೆ. ಕಳೆದ ವರ್ಷ ಮತ್ತಷ್ಟು ಹೆಚ್ಚಿದ್ದು, 291 ಮಕ್ಕಳು ಅನಾಥರಾಗಿದ್ದಾರೆ. ಈ ವರ್ಷದ ಮೊದಲ ಮೂರು ತಿಂಗಳಲ್ಲೇ 70 ಶಿಶುಗಳನ್ನು ಬಿಟ್ಟುಹೋಗಿದ್ದಾರೆ ಎಂಬ ಅಂಶ ರಾಜ್ಯ ಪೊಲೀಸ್‌ ಇಲಾಖೆ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.

ಈ ಅಮಾನವೀಯ ಕೃತ್ಯದ ನಡುವೆಯೂ ನವಜಾತ ಹೆಣ್ಣುಮಕ್ಕಳನ್ನು ಬಿಸಾಕಿ ಹೋಗುವ ಪ್ರಮಾಣ ಕಡಿಮೆಯಾಗಿರುವುದು ಒಳ್ಳೆಯ ಬೆಳವಣಿಗೆ. 2016 ಹಾಗೂ 2017ರಲ್ಲಿ ಅಧಿಕ ಸಂಖ್ಯೆಯ ನವಜಾತ ಹೆಣ್ಣುಮಕ್ಕಳನ್ನು ತ್ಯಜಿಸಿದ್ದರೆ, 2018ರಲ್ಲಿ ಪರಿತ್ಯಕ್ತ ಹೆಣ್ಣುಮಕ್ಕಳ ಸಂಖ್ಯೆ ಗಂಡುಮಕ್ಕಳ ಸಂಖ್ಯೆಗಿಂತ ಕಡಿಮೆ.

2016ರಲ್ಲಿ 160 ನವಜಾತ ಹೆಣ್ಣುಮಕ್ಕಳು ಹಾಗೂ 72 ನವಜಾತ ಗಂಡುಮಕ್ಕಳನ್ನು ರಕ್ಷಿಸಲಾಗಿತ್ತು. 2017ರಲ್ಲಿ ಈ ಪ್ರಮಾಣ ಕ್ರಮವಾಗಿ 152 ಮತ್ತು 102 ಆಗಿತ್ತು. 2018ರಲ್ಲಿ 197 ಗಂಡುಮಕ್ಕಳು ಹಾಗೂ 94 ಹೆಣ್ಣುಮಕ್ಕಳು ಪತ್ತೆಯಾಗಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.

ವಿವಾಹೇತರ ಸಂಬಂಧಗಳಿಂದ ಹುಟ್ಟಿದ ಮಕ್ಕಳು ಎಂಬ ಕಾರಣಕ್ಕೆ, ತ್ಯಜಿಸುವುದರಿಂದ ಹಿಡಿದು ಲೈಂಗಿಕ ಶಿಕ್ಷಣ ಕೊರತೆಯ ವರೆಗೆ ಹಲವು ಕಾರಣಗಳನ್ನು ಇದಕ್ಕೆ ನೀಡಲಾಗುತ್ತಿದೆ. ಲಿವ್ ಇನ್ ಸಂಬಂಧ ಇದಕ್ಕೆ ಪ್ರಮುಖ ಕಾರಣ ಎನ್ನುವುದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅವರ ಅಭಿಪ್ರಾಯ. ಮಕ್ಕಳನ್ನು ಹೀಗೆ ಕಳೆದುಕೊಳ್ಳುವ ಬಹುತೇಕ ಮಹಿಳೆಯರು ಭಾವನಾತ್ಮಕವಾಗಿ ಆಘಾತಕ್ಕೆ ಒಳಗಾಗುತ್ತಾರೆ. ಇಂಥ ಮಹಿಳೆಯರು ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬೇಕು ಎನ್ನುವುದು ಅವರ ಸಲಹೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News