ಮೈತ್ರಿ ಸರಕಾರದ ಉಳಿವಿಗಾಗಿ ರಾಜೀನಾಮೆಗೂ ಸಿದ್ದ: ಸಚಿವ ಯು.ಟಿ.ಖಾದರ್

Update: 2019-05-27 11:56 GMT

ಬೆಂಗಳೂರು, ಮೇ 27: ಮೈತ್ರಿ ಸರಕಾರ ಉಳಿವಿಗಾಗಿ ಹಾಗೂ ಕಾಂಗ್ರೆಸ್‌ನ ಹಿತಕ್ಕಾಗಿ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧನಿದ್ದೇನೆಂದು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದರು.

ಸೋಮವಾರ ಅಲ್ ಅಮೀನ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಲ್ ಅಮೀನ್ ಎಜುಕೇಷನ್ ವೀಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆ ಕುರಿತು ಪಕ್ಷದ ವರಿಷ್ಠರಿಂದ ಯಾವುದೆ ಪ್ರಸ್ತಾಪ ಬಂದಿಲ್ಲ. ಒಂದು ವೇಳೆ ನಾಯಕರಿಂದ ಸೂಚನೆ ಬಂದರೆ ರಾಜೀನಾಮೆ ನೀಡಲು ಸಿದ್ಧನಿದ್ಧೇನೆ ಎಂದರು.

ಜೆಡಿಎಸ್-ಕಾಂಗ್ರೆಸ್ ವರಿಷ್ಠರ ತೀರ್ಮಾನದಂತೆ ರಾಜ್ಯದ ಹಿತಕ್ಕಾಗಿ ಮೈತ್ರಿ ಸರಕಾರ ರಚಿಸಿದ್ದೇವೆ. ಆದರೆ, ಪ್ರತಿಪಕ್ಷದ ನಾಯಕರು ಮೈತ್ರಿಯನ್ನು ಹಾಳುಗೆಡವಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಜನರಲ್ಲಿ ಭೇದ-ಭಾವ ಮೂಡಿಸುವಂತಹ, ತಾರತಮ್ಯ ನೀತಿಯನ್ನು ಅನುಸರಿಸುವಂತಹ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ನಾನು ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧನಿದ್ದೇನೆಂದು ಅವರು ಸ್ಪಷ್ಟಪಡಿಸಿದರು.

ರೋಷನ್‌ ಬೇಗ್ ಬಿಜೆಪಿ ಹೋಗಬಾರದು: ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದರೆ ಮಾಜಿ ಸಚಿವ ರೋಷನ್‌ಬೇಗ್‌ರನ್ನು ಸಚಿವ ಸ್ಥಾನದಿಂದ ಕೈ ಬಿಡುತ್ತಿರಲಿಲ್ಲ. ಆದರೆ, ಮೈತ್ರಿ ಸರಕಾರ ಆಗಿರುವುದರಿಂದ ಮೈತ್ರಿ ವರಿಷ್ಠರ ತೀರ್ಮಾನದಿಂದ ಸಚಿವ ಸ್ಥಾನಗಳು ಹಂಚಿಕೆಯಾಗುತ್ತದೆ. ಹೀಗಾಗಿ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ರೋಷನ್‌ಬೇಗ್ ಕಾಂಗ್ರೆಸನ್ನು ದೂಷಿಸಬಾರದು ಎಂದು ಅವರು ಹೇಳಿದರು.

ರೋಷನ್‌ ಬೇಗ್ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿಗೆ ಹೋಗುವ ಮುನ್ಸೂಚನೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ, ರೋಷನ್‌ಬೇಗ್‌ರನ್ನು ಎರಡು ಬಾರಿ ಜೈಲಿಗೆ ಕಳುಹಿಸಲು ಬಿಜೆಪಿ ಷಡ್ಯಂತ್ರ ರೂಪಿಸಿತ್ತು. ರುದ್ರೇಶ್ ಹತ್ಯೆಯ ಆರೋಪದಲ್ಲಿ ಅವರನ್ನು ಸಿಲುಕಿಸಲು ಪ್ರಯತ್ನಿಸಲಾಗಿತ್ತು. ಇಂತಹ ಸಮಯದಲ್ಲಿ ರೋಷನ್‌ಬೇಗ್‌ಗೆ ಬೆಂಬಲವಾಗಿ ಕಾಂಗ್ರೆಸ್ ನಾಯಕರು ನಿಂತಿದ್ದನ್ನು ಮರೆಯಬಾರದು ಎಂದು ಅವರು ಹೇಳಿದರು.

ನರೇಂದ್ರ ಮೋದಿ ಮುಸ್ಲಿಮರ ಓಲೈಕೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಕಳೆದ ಐದು ವರ್ಷ ಅವರು ನೀಡಿದ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ ಎಂಬುದನ್ನು ಹೇಳಲಿ. ಕೇವಲ ಮಾತಿನಲ್ಲಿ ಭರವಸೆ ನೀಡುವುದಕ್ಕಿಂತ ಕೃತಿಯಲ್ಲಿ ಮಾಡಿ ತೋರಿಸಲಿ. ಡಾ.ಬಿ.ಆರ್.ಅಂಬೇಡ್ಕರ್ ರೂಪಿಸಿದ ಸಂವಿಧಾನದ ತತ್ವ ಸಿದ್ಧಾಂತದಡಿ ಯಾರೇ ಕಾರ್ಯನಿರ್ವಹಿಸಿದರು ಅವರಿಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ.

-ಯು.ಟಿ.ಖಾದರ್, ವಸತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News