‘ಕರ್ನಾಟಕದ ಸಿಂಗಂ’ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

Update: 2019-05-28 12:42 GMT

ಬೆಂಗಳೂರು, ಮೇ 28: ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ, ‘ಕರ್ನಾಟಕದ ಸಿಂಗಂ’ ಖ್ಯಾತಿಯ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಪತ್ರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಂಗಳವಾರ ಸಲ್ಲಿಸಿದರು.

ಈಗಾಗಲೇ ಪೊಲೀಸ್ ಮಹಾನಿರ್ದೇಶಕಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಅಣ್ಣಾಮಲೈ ಅವರು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ಸ್ವಯಂ ಪ್ರೇರಿತ ರಾಜೀನಾಮೆ ಸಲ್ಲಿಸಿದ್ದು, ತಾವು ಅಂಗೀಕರಿಸುವಂತೆ ಮನವಿ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ರಾಜೀನಾಮೆ ಬಳಿಕವೂ ಮುಖ್ಯಮಂತ್ರಿ ತಮ್ಮ ಸೇವೆ ಬೇಕು ಎಂದು ಹೇಳಿದ್ದಾರೆ. ಆದರೆ, ನನ್ನ ನಿರ್ಧಾರ ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೆ, ರಾಜಕೀಯ ಪ್ರವೇಶ ಕುರಿತು ಚರ್ಚೆ ನಡೆಸಿಲ್ಲ. ಸದ್ಯ, ತಾನು ಪ್ರವಾಸಕ್ಕೆ ತೆರಳುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ಗೃಹ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಪ್ರತಿಯೊಬ್ಬರು ಸೇವೆ ಸಲ್ಲಿಸಲು ಸಹಕಾರ ನೀಡಿದ್ದಾರೆ. ಯಾವುದೇ ವ್ಯಕ್ತಿಯ ಒತ್ತಡ ನನ್ನ ಮೇಲಿಲ್ಲ. ಅದೇ ರೀತಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಸಹಕಾರ ನೀಡಿದ್ದು, ಯಾರ ಮೇಲೂ ದ್ವೇಷ ಇಲ್ಲ ಎಂದು ಅಣ್ಣಾಮಲೈ ಸ್ಪಷ್ಟನೆ ನೀಡಿದರು.  

ಪತ್ರದಲ್ಲಿ ಏನಿದೆ?: ಕಳೆದ 2 ದಿನಗಳಿಂದಲೂ ನನ್ನ ರಾಜೀನಾಮೆ ಕುರಿತಾಗಿ ಎಲ್ಲೆಡೆ ಸುದ್ದಿ ಬಂದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಬಯಸುತ್ತೇನೆ. ಇಂದು(ಮೇ 28) ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದ್ದೇನೆ. ಅಂಗೀಕಾರ, ಪತ್ರ ವ್ಯವಹಾರ ಎಲ್ಲ ಪ್ರಕ್ರಿಯೆಗಳಿಗೂ ಕೆಲ ಕಾಲ ಸಮಯ ತೆಗೆದುಕೊಳ್ಳುತ್ತದೆ. ಕಳೆದ 6 ತಿಂಗಳಿನಿಂದಲೂ ನಾನು ಈ ಆಲೋಚನೆಯಲ್ಲಿದ್ದೆ. ಐಪಿಎಸ್‌ಗೆ ಆಯ್ಕೆಯಾಗಿ 9 ವರ್ಷಗಳೇ ಆಯ್ತು. ನಾನು ಆ 9 ವರ್ಷಗಳ ಪ್ರತಿಯೊಂದು ಕ್ಷಣದಲ್ಲೂ ಖಾಕಿ ಜೊತೆಯಲ್ಲೇ ಬದುಕಿದೆ. ಪೊಲೀಸ್ ಕೆಲಸಕ್ಕಿಂತ ಸರಿಸಮನಾದ ಮತ್ತೊಂದು ಕೆಲಸ ಇಲ್ಲ ಎಂದು ನಂಬಿದವನು ನಾನು. ಇದನ್ನ ನನ್ನ ಎಷ್ಟೋ ಮಂದಿ ಜೊತೆಗಾರರೊಂದಿಗೂ ಹಂಚಿಕೊಂಡಿದ್ದೇನೆ. ನನ್ನ ಪ್ರಕಾರ ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಕೆಲಸ. ಜೊತೆಗೆ ಹೆಚ್ಚು ಜವಾಬ್ದಾರಿಯುತ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಅಂತೆಯೇ ಸಾಕಷ್ಟು ವೈಯಕ್ತಿಕ ಸಭೆ, ಸಮಾರಂಭ, ಕುಟುಂಬದ ಕೆಲಸ ಕಾರ್ಯಗಳನ್ನೂ ಕಳೆದುಕೊಂಡಿದ್ದೇನೆ. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯೋಕೆ ಸಹಕರಿಸಿದ ಹಲವರಿಗೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ. ಇದು ನನ್ನನ್ನು ಆಗ್ಗಾಗ್ಗೆ ಚಿಂತನೆಗೆ ಈಡು ಮಾಡಿದ್ದು ಸುಳ್ಳಲ್ಲ.

ಕಳೆದ ವರ್ಷ ನಾನು ಕೈಲಾಸ ಮಾನಸ ಸರೋವರ ಯಾತ್ರೆಯಲ್ಲಿ ಪಾಲ್ಗೊಂಡಿದ್ದೆ. ಆ ಯಾತ್ರೆ ನನ್ನ ಕಣ್ಣು ತೆರೆಸಿತು. ನನ್ನ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ಸಿಕ್ಕಿತು. ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿಯವರ ಸಾವು ನನ್ನನ್ನ ತೀವ್ರವಾಗಿ ಭಾದಿಸಿತು. ಅಲ್ಲದೆ, ಬದುಕಿನ ಮತ್ತೊಂದು ಆಯಾಮಕ್ಕೆ ಹೊರಳಲು, ನನ್ನ ಬದುಕನ್ನು ನಾನೇ ಓದಿಕೊಳ್ಳಲು ವೇದಿಕೆ ಸೃಷ್ಟಿಸಿತು.

ಬದುಕಿನ ಎಲ್ಲ ಮಜಲುಗಳಿಗೂ ಒಂದು ಕೊನೆ ಇದ್ದೇ ಇದೆ. ನನ್ನ ಖಾಕಿ ಬದುಕಿನ ಕೆಲಸ ಮುಗಿದಿದೆ. ಹಾಗಂತ ನಾನು ನಿರ್ಧರಿಸಿದ್ದೇನೆ. ನಾನು ಲೋಕಸಭಾ ಚುನಾವಣೆಗೆ ಮೊದಲೇ ಈ ಬಗ್ಗೆ ನಿರ್ಧರಿಸಿದ್ದೆ. ಆದರೆ, ಚುನಾವಣಾ ಸಮಯದಲ್ಲಿ ರಾಜೀನಾಮೆ ಕೊಟ್ಟು ಕರ್ತವ್ಯದಿಂದ ಹಿಂದೆ ಸರಿಯಲು ಮನಸ್ಸು ಒಪ್ಪಲಿಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾರಿಗಾದರೂ ಯಾವುದಾದರೂ ತೊಂದರೆ ಆಗಿದ್ದರೆ ಅಥವಾ ಮನಃಸ್ತಾಪಗಳಿದ್ದರೆ ಅಂಥವರ ಬಳಿ ಕ್ಷಮೆ ಕೇಳುತ್ತೇನೆ. ಹಲವರು ಮುಂದೇನು ಎನ್ನುತ್ತಿದ್ದಾರೆ. ನಾನು ದೊಡ್ಡ ಮಟ್ಟಿನ ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡಿಲ್ಲ. ನನಗೆ ಸ್ವಲ್ಪಸಮಯ ಬೇಕಿದೆ. ನನ್ನ ಜೀವನದ ಅತಿ ಚಿಕ್ಕ ಚಿಕ್ಕ ಘಟನೆಗಳು, ಚಿಕ್ಕ ಚಿಕ್ಕ ವಿಷಯಗಳನ್ನ ಸವಿಯಲು ನನಗೆ ಸಮಯ ಬೇಕಿದೆ. ನನ್ನ ಮಗನೊಟ್ಟಿಗೆ ಸಮಯ ಕಳೆಯಬೇಕಿದೆ. ಅವನ ಪ್ರತಿಯೊಂದು ಬೆಳವಣಿಗೆಗೂ ತಂದೆಯಾಗಿ ನಾನು ಸಮಯ ಕೊಡಬೇಕಿದೆ. ನಾನು ನನ್ನ ಕುಟುಂಬದತ್ತ ಹೊರಳಬೇಕಿದೆ. ಜೀವನ ಇನ್ನೂ ತುಂಬಾ ಇದೆ. ವೃತ್ತಿ ಬಾಂಧವರನ್ನು ನಾನು ತುಂಬಾನೇ ನೆನಪಿಸಿಕೊಳ್ಳುತ್ತೇನೆ. ಜೊತೆಗೆ ನನ್ನನ್ನು ಇಷ್ಟಪಟ್ಟ ಜನರನ್ನು ಕೂಡ. ಪ್ರಮುಖವಾಗಿ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಪ್ರಮುಖರನ್ನು. ನಾನು ನಿಮ್ಮೆಲ್ಲರ ಪ್ರೀತಿ ಮತ್ತು ನನ್ನ ಹಿರಿಯ ಅಧಿಕಾರಿಗಳ ಮಾರ್ಗದರ್ಶನಗಳನ್ನು ಮರೆಯಲು ಸಾಧ್ಯವಿಲ್ಲ.

ಹಿರಿ-ಕಿರಿ ಸೇರಿ ಎಲ್ಲ ವರ್ಗದ ಅಧಿಕಾರಿಗಳ ಶ್ರೇಯೋಭಿವೃದ್ಧಿಗೆ ನಾನು ಸಾಕಷ್ಟು ದುಡಿದಿದ್ದೇನೆ ಎಂಬ ಆತ್ಮತೃಪ್ತಿ ಇದೆ. ಅವರ ವೃತ್ತಿ ಬದುಕು ಮತ್ತು ದೈನಂದಿನ ಜೀವನ ಅವಶ್ಯವಾಗಿ ಇನ್ನೂ ಹೆಚ್ಚು ಬೆಳಗಬೇಕಿದೆ. ನನ್ನಿಂದ ಯಾರಿಗಾದರೂ ಯಾವುದೇ ಸಮಯದಲ್ಲಾದರೂ ಮನಸ್ಸಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಕೆ.ಅಣ್ಣಾಮಲೈ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಅಣ್ಣಾಮಲೈ ಹಿನ್ನೆಲೆ

ತಮಿಳುನಾಡಿನ ಕರೂರು ಮೂಲದ ಅಣ್ಣಾಮಲೈ ಅವರು, 1984ರ ಜೂನ್ 4 ರಂದು ಜನಿಸಿದ್ದು, ಬಿಇ ಮೆಕ್ಯಾನಿಕ್ ಜೊತೆಗೆ ಎಂಬಿಎ ಪದವೀಧರರಾಗಿದ್ದಾರೆ. 2011ರ ಕರ್ನಾಟಕ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಅವರು, ಕಾರ್ಕಳದಲ್ಲಿ ಎಎಸ್ಪಿಯಾಗಿ ನಂತರ, ಉಡುಪಿ, ಚಿಕ್ಕಮಗಳೂರಿನಲ್ಲಿ ಎಸ್ಪಿಯಾಗಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಳೆದ 2018ರ ಅಕ್ಟೋಬರ್‌ನಲ್ಲಿ ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದು 8 ತಿಂಗಳುಗಳ ಕಾಲ ಸೇವೆ ಸಲ್ಲಿಸಿ ಖಡಕ್ ಅಧಿಕಾರಿ ಎನ್ನುವ ಹೆಸರು ಗಳಿಸಿದ್ದಾರೆ.

‘ಅವರ ಸೇವೆಗೆ ಧನ್ಯವಾದ’

ದಕ್ಷ ಪೊಲೀಸ್ ಅಧಿಕಾರಿ ಅಣ್ಣಾಮಲೈ 24 ಗಂಟೆಯೂ ತಮ್ಮ ಸೇವೆಯನ್ನು ನಿಷ್ಠೆಯಿಂದ ಮಾಡಿದ್ದು, ಅವರ ಸೇವೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರು ಎಲ್ಲಿ ಹೋದರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ

-ಟಿ.ಸುನೀಲ್‌ಕುಮಾರ್, ನಗರ ಪೊಲೀಸ್ ಆಯುಕ್ತ

‘ರಾಜಕೀಯ ಒತ್ತಡ ಇಲ್ಲ’

ನನಗೆ ರಾಜಕೀಯ ಒತ್ತಡ ಇಲ್ಲ, ಸ್ವಯಂ ಪ್ರೇರಿತ ರಾಜೀನಾಮೆ ನೀಡಿದ್ದೇನೆ. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನನ್ನನ್ನು ಬೆಂಗಳೂರಿಗೆ ಕರೆತಂದು ಉತ್ತಮ ಸೇವೆ ಮಾಡಲು ಅವಕಾಶ ನೀಡಿದರು. ಅದೇ ರೀತಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಎಂ.ಬಿ.ಪಾಟೀಲ್, ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿದಂತೆ ಪ್ರಮುಖರು ಸೇವೆ ಅವಕಾಶ, ಸಹಕಾರ ನೀಡಿದ್ದಾರೆ.

-ಕೆ.ಅಣ್ಣಾಮಲೈ, ಐಪಿಎಸ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News