ರಾಜೀನಾಮೆ ಪತ್ರದಲ್ಲಿ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಬಗ್ಗೆ ಅಣ್ಣಾಮಲೈ ಮಾತು...

Update: 2019-05-28 11:04 GMT

ದಕ್ಷ ಪೊಲೀಸ್ ಅಧಿಕಾರಿ, ‘ಕರ್ನಾಟಕದ ಸಿಂಗಂ’ ಖ್ಯಾತಿಯ ಅಣ್ಣಾಮಲೈ ಇಂದು ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು ಕಾರ್ಕಳ, ಚಿಕ್ಕಮಗಳೂರು, ಉಡುಪಿ ಮತ್ತು ಬೆಂಗಳೂರಿನ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ಪತ್ರದಲ್ಲಿ ಅವರು ಇತ್ತೀಚೆಗೆ ನಿಧನರಾದ ದಕ್ಷ ಪೊಲೀಸ್ ಅಧಿಕಾರಿ ಮಧುಕರ್ ಶೆಟ್ಟಿಯವರ ಬಗ್ಗೆಯೂ ಬರೆದಿದ್ದಾರೆ.

ಎಲ್ಲರಿಗೂ ನಮಸ್ಕಾರ. ನನ್ನ ರಾಜೀನಾಮೆಯ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ಸುದ್ದಿಗಳ ಬಗ್ಗೆ ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ. ಇಂದು ಮೇ 28ರಂದು ನಾನು ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹರಿದಾಡುತ್ತಿರುವ ಎಲ್ಲಾ ಊಹಾಪೋಹಗಳಿಗೆ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. 6 ತಿಂಗಳ ಕಾಲ ಚಿಂತನೆ ನಡೆಸಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ನಾನು ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ 9 ವರ್ಷ ಸಂದಿದೆ ಮತ್ತು ನನ್ನ ಖಾಕಿಯೊಳಗೆ ಪ್ರತಿಕ್ಷಣವೂ ಬದುಕಿದ್ದೇನೆ. ಈ ಖಾಕಿಯಲ್ಲಿ ಸಿಗುವ ಹೆಮ್ಮೆಗೆ ಯಾವುದೇ ಸಾಟಿಯಿಲ್ಲ ಮತ್ತು ಸಹೋದ್ಯೋಗಿಗಳೊಂದಿಗೆ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಪೊಲೀಸ್ ಸೇವೆಯೆನ್ನುವುದು ದೇವರಿಗೆ ಹತ್ತಿರವಾದುದು ಎಂದು ನಾನು ಭಾವಿಸುತ್ತೇನೆ. ಹೆಚ್ಚು ಒತ್ತಡದ ಇಂತಹ ಕೆಲಸಗಳಲ್ಲಿ ವೈಯಕ್ತಿಕ ಕುಂದುಕೊರತೆಗಳು ಇವೆ ಎನ್ನುವುದು ಕೂಡ ಸತ್ಯ. ನಾನು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ನನ್ನ ಕಷ್ಟದ ಸಮಯದಲ್ಲಿ ಜೊತೆಗಿದ್ದವರ ಜೊತೆ ನಿಲ್ಲಲು ನನಗೆ ಸಾಧ್ಯವಾಗಲಿಲ್ಲ. ನಾನು ಬಯಸಿದಾಗ ಕೆಲವೊಮ್ಮೆ ಮಾತನಾಡಲು ಸಾಧ್ಯವಾಗಲಿಲ್ಲ.

ಕಳೆದ ವರ್ಷ ಕೈಲಾಶ್ ಮಾನಸರೋವರಕ್ಕೆ ನೀಡಿದ್ದ ಭೇಟಿ ನನ್ನ ಕಣ್ಣು ತೆರೆಸಿ ನನ್ನ ಬದುಕಿನ ಆದ್ಯತೆಗಳ ಬಗ್ಗೆ ನೋಡಲು ಸಹಾಯ ಮಾಡಿತು. ಮಧುಕರ್ ಶೆಟ್ಟಿ ಸರ್ ಅವರ ನಿಧನ ನನ್ನ ಬದುಕನ್ನು ಮತ್ತೊಮ್ಮೆ ಮರು ಅವಲೋಕನ ಮಾಡಲು ಪ್ರೇರೇಪಿಸಿತು. ಖಾಕಿ ಜೊತೆಗಿನ ನನ್ನ ಸಮಯವನ್ನು ಕೊನೆಯಾಗಿಸಲು ನಾನು ನಿರ್ಧರಿಸಿದ್ದೇನೆ. ಲೋಕಸಭಾ ಚುನಾವಣೆ ವೇಳೆ ರಾಜೀನಾಮೆ ನೀಡಬೇಕು ಎಂದು ನಾನು ಬಯಸಿದ್ದೆ ಮತ್ತು ನಿರ್ಧರಿಸಿದ್ದೆ. ಆದರೆ ಆ ಸಮಯದಲ್ಲಿ ರಾಜೀನಾಮೆ ನೀಡುವುದರಿಂದ ಸರಕಾರಕ್ಕೆ ಸಮಸ್ಯೆಯಾಗುವುದಕ್ಕಾಗಿ ರಾಜೀನಾಮೆ ನೀಡಿರಲಿಲ್ಲ. ನನ್ನ ರಾಜೀನಾಮೆಯಿಂದ ನಿಮಗೇನಾದರು ನೋವಾಗಿದ್ದರೆ ನಾನು ಪ್ರಾಮಾಣಿಕವಾಗಿ ಅದಕ್ಕೆ ಕ್ಷಮೆ ಯಾಚಿಸುತ್ತಿದ್ದೇನೆ.

ಮುಂದೇನು?

ನಾನು ಮುಂದೇನು ಮಾಡಬಲ್ಲೆ ಎಂದು ಯೋಚಿಸುತ್ತಿರುವವರಿಗಾಗಿ, ಭಾರೀ ಮಹಾತ್ವಾಕಾಂಕ್ಷೆಗಳನ್ನು ಹೊಂದಿರಲು ನಾನು ತೀರಾ ಸಣ್ಣ ಮನುಷ್ಯ. ನಾನು ಕೆಲ ಸಮಯವನ್ನು ಪಡೆಯಲು ಬಯಸುತ್ತೇನೆ ಮತ್ತು ನನ್ನ ಜೀವನದಲ್ಲಿ ಕಳೆದುಕೊಂಡ ಸಣ್ಣ ವಿಷಯಗಳನ್ನು ಆನಂದಿಸಲು ಬಯಸುತ್ತೇನೆ. ನನ್ನ ಪುತ್ರನಿಗೆ ಒಳ್ಳೆಯ ತಂದೆಯಾಗಲು ಬಯಸಿದ್ದೇನೆ. ನನ್ನ  ಮನೆಯಲ್ಲಿರುವ ಕೃಷಿ ಪ್ರದೇಶಕ್ಕೆ ಹಿಂದಿರುಗಲು, ನಾನು ಇನ್ನು ಮುಂದೆ ಪೊಲೀಸ್ ಅಲ್ಲದ ಕಾರಣ ನನ್ನ ಕುರಿಗಳು ನಾನು ಹೇಳಿದಂತೆ ಕೇಳುತ್ತವೆಯೇ ಎಂದು ನೋಡಲು ಬಯಸಿದ್ದೇನೆ.

ನ್ಯಾಯದ ಹಾದಿಯಲ್ಲಿ ನನ್ನ ಜೊತೆ ನಡೆದ ಕಾರ್ಕಳ, ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನ ಜನರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮಲ್ಲಿ ಹಲವರು ಅಪರಿಪೂರ್ಣನಾಗಿದ್ದ ನನ್ನನ್ನು ತಿದ್ದಿ ಸ್ವೀಕಾರಾರ್ಹ ವ್ಯಕ್ತಿಯನ್ನಾಗಿ ಮಾಡಿದ್ದೀರಿ. ನನಗೆ ಎಲ್ಲವನ್ನೂ ಕಲಿಸಿದ ಹಿರಿಯರ ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಎಲ್ಲಾ ಕಾನ್ ಸ್ಟೇಬಲ್ ಗಳನ್ನು, ಕಿರಿಯ ಸಹೋದ್ಯೋಗಿಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ.

ಘನತೆ ಮತ್ತು ಹೆಮ್ಮೆಯಿಂದ ನಾನು ನಿಮ್ಮ ಸೇವೆ ಸಲ್ಲಿಸಿದ್ದೇನೆ ಎನ್ನುವ ನಂಬಿಕೆಯಿದೆ. ಒಂದು ವೇಳೆ ನಾನು ಯಾವುದೇ ಸಮಯದಲ್ಲಿ ನಿಮಗೆ ಯಾರಿಗಾದರೂ ನೋಯಿಸಿದ್ದಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ.

ನಾನು ನಿಮ್ಮೆಲ್ಲರನ್ನೂ ಪ್ರಮುಖವಾಗಿ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.

ನಿಮ್ಮ ಪ್ರೀತಿಯ

ಅಣ್ಣಾಮಲೈ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News