ರಾಜ್ಯದಿಂದ ಆಯ್ಕೆಯಾದ ಏಕೈಕ ಮಹಿಳಾ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಅಭಿನಂದನೆ

Update: 2019-05-28 14:36 GMT

ಬೆಂಗಳೂರು, ಮೇ 28: ರಾಜ್ಯದಿಂದ ಆಯ್ಕೆಯಾದ ಏಕೈಕ ಮಹಿಳಾ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆಗೆ ಅಭಿನಂದನಾ ಕಾರ್ಯಕ್ರಮವನ್ನು ಮಂಗಳವಾರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆಯನ್ನು ಅಭಿನಂದಿಸಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯ ಅಭೂತ ಪೂರ್ವ ಗೆಲುವಿಗೆ ಕಾರಣಕರ್ತರಾದ ಯಡಿಯೂರಪ್ಪರನ್ನು, ಮಹಿಳಾ ಮೋರ್ಚಾ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ವಿಧಾನಸಭೆಯಲ್ಲಿ ನಾನು ಮುಖ್ಯಮಂತ್ರಿಯಾಗಿ ರಾಜೀನಾಮೆ ನೀಡಿ, ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ಸರಕಾರದ ರೂವಾರಿ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಿದ್ದೆ, ನಿಮ್ಮನ್ನು ನಿಮ್ಮ ಪಕ್ಷವನ್ನು ಅಪ್ಪ-ಮಕ್ಕಳು ಸೇರಿ ಕರ್ನಾಟಕದಲ್ಲಿ ಇಲ್ಲದಂತೆ ಮಾಡುತ್ತಾರೆ ಎಂದು. ಆದರೆ, ಅವರಿಗೆ ಅರ್ಥ ಆಗಿರಲಿಲ್ಲ ಎಂದರು. ರಾಜ್ಯದ ಜನ ಈ ಮೈತ್ರಿ ಸರಕಾರವನ್ನು ತಿರಸ್ಕಾರ ಮಾಡಿದ್ದರೂ ಇನ್ನೂ ಕಚ್ಚಾಟದಲ್ಲಿದ್ದಾರೆ. ಮೈತ್ರಿ ಸರಕಾರ ತೊಲಗುವವರೆಗೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದು ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

ಶೋಭಾ ಕರಂದ್ಲಾಜೆ ಅವರ ಅನುಭವದ ಲಾಭ ಸಿಗುವಂತೆ ಆಗಲು ಸೂಕ್ತ ಸ್ಥಾನ ನೀಡುವಂತೆ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಮನವಿ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಶಾಸಕಿ ರೂಪಾಲಿ ನಾಯಕ್, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರುತಿ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News