ಸ್ಲಮ್ ನಿವಾಸಿಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಗೊಳ್ಳಲಿ: ಬಂಜಗೆರೆ ಜಯಪ್ರಕಾಶ್

Update: 2019-05-28 14:37 GMT

ಬೆಂಗಳೂರು, ಮೇ 28: ರಾಜ್ಯದ ನಗರದ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಲಮ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯ, ಉದ್ಯೋಗ ಭದ್ರತೆ ಹಾಗೂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚನಾತ್ಮಕ ಅಭಿವೃದ್ಧಿಗೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಸಂಸ್ಕೃತಿ ಚಿಂತಕ ಬಂಜಗೆರೆ ಜಯಪ್ರಕಾಶ್ ತಿಳಿಸಿದರು.

ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ, ಸ್ಲಮ್ ಜನಾಂದೋಲನ ಹಾಗೂ ತಳ ಸಮುದಾಯಗಳ ಅಧ್ಯಯನ ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಬೆಂಗಳೂರು ವಿಶ್ವವಿದ್ಯಾಲಯದ ಎಚ್.ಎನ್.ಸಭಾಂಗಣದಲ್ಲಿ ಆಯೋಜಿಸಿದ್ದ ‘ಸ್ಲಂ ನಿವಾಸಿಗಳ ಕೊಡುಗೆ ಮತ್ತು ನಗರದ ಮೇಲಿನ ಹಕ್ಕಿಗಾಗಿ ಸಮಾವೇಶ ಮತ್ತು ಸಾಂಸ್ಕೃತಿಕ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರಗಳನ್ನು ಕಟ್ಟುವಲ್ಲಿ ಸ್ಲಮ್ ನಿವಾಸಿಗಳು ಕೊಡುಗೆ ಅಪಾರ. ಅದು ಕಟ್ಟಡ ಕಟ್ಟುವಲ್ಲಿ, ರಸ್ತೆ ನಿರ್ಮಾಣದಲ್ಲಿ, ನಗರವನ್ನು ಸ್ವಚ್ಛ ಮಾಡುವುದರಲ್ಲಿ, ದಿನಗೂಲಿ ಕಾರ್ಮಿಕರಾಗಿ ನಗರದ ಬೆಳವಣಿಗೆಯಲ್ಲಿ ಬಹುಮುಖ್ಯವಾದ ಪಾತ್ರ ವಹಿಸುತ್ತಿದ್ದಾರೆ. ಅವರು ಒಂದು ದಿನ ಕೆಲಸ ಮಾಡಿಲ್ಲವೆಂದರೆ ನಗರಗಳು ಸಂಪೂರ್ಣ ಬಂದ್ ಆಗಲಿವೆ. ಇಷ್ಟು ಮಹತ್ವದ ಪಾತ್ರವನ್ನು ವಹಿಸುತ್ತಿರುವ ಸ್ಲಮ್ ನಿವಾಸಿಗಳಿಗೆ ಕನಿಷ್ಟ ಸೌಲಭ್ಯಗಳನ್ನು ನೀಡುವಲ್ಲಿ ನಮ್ಮ ಸರಕಾರಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಸರಕಾರಗಳು ಗ್ರಾಮಾಂತರ ಪ್ರದೇಶ, ರೈತರು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಅಲ್ಲಿನ ಜನತೆ ವಲಸಿಗರಾಗಿ ನಗರದಲ್ಲಿ ಚಿಕ್ಕ ಚಿಕ್ಕ ಶೆಡ್‌ಗಳಲ್ಲಿ ವಾಸಿಸುತ್ತಾರೆ. ಈ ವಲಸಿಗ ಗ್ರಾಮಾಂತರ ಜನತೆ ನಗರಕ್ಕೆ ಬಂದು 20 ವರ್ಷ ಕಳೆದರೂ ಇಲ್ಲಿ ವಾಸಿಸಲು ಕನಿಷ್ಟ ಒಂದು ಮನೆಯನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಸ್ಯೆಗಳಿಂದಲೆ ಜೀನವ ಸಾಗಿಸುತ್ತಿರುವ ಸ್ಲಮ್ ನಿವಾಸಿಗಳ ಅಭಿವೃದ್ಧಿಗೆ ಸರಕಾರದ ಆದ್ಯತೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.

ಸ್ಲಮ್ ಜನಾಂದೋಲನ ಸಂಘಟನೆಯ ಸಿ.ನರಸಿಂಹಮೂರ್ತಿ ಮಾತನಾಡಿ, ಸರಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಸ್ಲಮ್ ನಿವಾಸಿಗಳನ್ನು ಒಳಗೊಳಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿವೆ. ಆದರೆ, ನಗರದ ಬಹುಮುಖ್ಯವಾದ ಬೆಳವಣಿಗೆಯಲ್ಲಿ ಸ್ಲಮ್ ನಿವಾಸಿಗಳೆ ಬಹುಮುಖ್ಯವಾದ ಪಾತ್ರ ವಹಿಸುತ್ತಿದ್ದಾರೆ ಎಂಬುದನ್ನು ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇಷ್ಟಾಗಿಯೂ ಸ್ಲಮ್ ಜನರ ಕುರಿತು ಅಧಿಕಾರಿ, ಜನಪ್ರತಿನಿಧಿಗಳ ವರ್ಗ ಅಸಡ್ಡೆ ಭಾವನೆ ತಾಳಿದೆ. ಇಂತಹ ಭಾವನೆ ಹೋಗದ ಹೊರತು ಸ್ಲಮ್ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳು ಸಿಗದು ಎಂದು ತಿಳಿಸಿದರು.

ಸರಕಾರದ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 2008 ಸ್ಲಮ್‌ಗಳಿವೆ ಎಂದು ದಾಖಲಿಸಲಾಗಿದೆ. ನಮ್ಮ ಸರ್ವೆಯ ಪ್ರಕಾರ 5200 ಸ್ಲಮ್‌ಗಳಿವೆ. ಇಲ್ಲಿ ವಾಸಿಸುತ್ತಿರುವ ಶೇ.70ರಷ್ಟು ಜನತೆ ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ನಗರದ ಉಸಿರು ಇರುವುದು ಸ್ಲಮ್ ನಿವಾಸಿಗಳ ಕೆಲಸ ಕಾರ್ಯಗಳಲ್ಲಿ ಎಂಬುದು ಸತ್ಯವಾದರೂ ಬದುಕಿನ ಕನಿಷ್ಟ ಸೌಲಭ್ಯವು ಇಲ್ಲಿಯವರೆಗೂ ಸಿಕ್ಕಿಲ್ಲವೆಂದು ಅವರು ಹೇಳಿದರು.

ಈ ವೇಳೆ ಶಾಸಕ ಎಸ್.ಟಿ.ಸೋಮಶೇಖರ್, ಬೆಂವಿವಿ ಸಿಂಡಿಕೇಟ್ ಸದಸ್ಯ ಬಿ.ಶಿವಣ್ಣ., ಬೆಂವಿವಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಸಮತಾ ದೇಶಮಾನೆ, ತಳಸಮುದಾಯಗಳ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಆರ್.ವಿ.ಚಂದ್ರಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಸಂಜೀವ್‌ರಾಜ್ ಮತ್ತಿತರರಿದ್ದರು.

ಮೂಲಭೂತವಾಗಿ ನಗರಗಳು ಯಾರೊಬ್ಬರ ಸೊತ್ತಲ್ಲ. ಅದು, ಎಲ್ಲರಿಗೂ ಸೇರಿದ್ದು. ಬಹುತೇಕ ವಲಸಿಗರಿಂದಲೇ ನಗರಗಳು ನಿರ್ಮಾಣವಾಗಿರುತ್ತವೆ. ಒಬ್ಬ ವ್ಯಾಪಾರಿ, ಕಾರ್ಮಿಕ, ಕೂಲಿಕಾರ, ಉದ್ಯಮಿ ಸೇರಿದಂತೆ ಎಲ್ಲ ವರ್ಗದ, ಭಾಷೆಯ, ಸಮುದಾಯದ ಜನರು ಸೇರಿ ನಗರವನ್ನು ಕಟ್ಟಿರುತ್ತಾರೆ. ಹೀಗಾಗಿ ಇಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಮಾನವಾದ ಸೌಲಭ್ಯಗಳನ್ನು ಒದಗಿಸುವುದು ಸರಕಾರದ ಕರ್ತವ್ಯ.

-ಬಂಜಗೆರೆ ಜಯಪ್ರಕಾಶ್, ಸಂಸ್ಕೃತಿ ಚಿಂತಕ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News