ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯ: ಡಿ.ವಿ.ಸದಾನಂದಗೌಡ

Update: 2019-05-28 12:54 GMT

ಬೆಂಗಳೂರು, ಮೇ 28: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸುತ್ತಿರುವ ಮಳೆ ಅನಾಹುತ ಸೇರಿದಂತೆ ಮಹಾನಗರದ ನಾಗರಿಕರ ಕುಂದು-ಕೊರತೆ ನಿವಾರಿಸಿ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯವಾಗಿದೆ ಎಂದು ಸಂಸದ ಡಿ.ವಿ.ಸದಾನಂದಗೌಡ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ನಮ್ಮ ನಗರ ಬೆಂಗಳೂರಿನ ನಾಗರಿಕರಿಗೆ ಸರಿಯಾದ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ ರಚನೆ ಇಂದು ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ ಎಂದಿದ್ದಾರೆ.

ಈ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಪಕ್ಷಾತೀತ ನಿರ್ಣಯಬೇಕು. ಚುನಾಯಿತ ಪ್ರತಿನಿಧಿಗಳು, ಸಮರ್ಪಕ ಅಧಿಕಾರಿಗಳು ಮತ್ತು ಕೆಲ ನಾಗರಿಕರನ್ನು ಒಳಗೊಂಡ ಈ ಪ್ರಾಧಿಕಾರ ನಿಯಮಾನುಸಾರ ರಚನೆಯಾಗಿ ತನ್ನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ನಾಗರಿಕ ಸೌಲಭ್ಯದಲ್ಲಿ ವಿಶ್ವ ದರ್ಜೆಗೆ ಏರಿಸಲು ಸಾಧ್ಯ ಎಂದು ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ಬೆಸ್ಕಾಂ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಬಿಎಂಪಿ, ಬಿಟಿಪಿ, ಅರಣ್ಯ, ಅಗ್ನಿಶಾಮಕ, ಆರೋಗ್ಯ, ಪರಿಸರ ಹಾಗೂ ಕೆರೆ ಸಂರಕ್ಷಣಾ ಪ್ರಾಧಿಕಾರಗಳನ್ನೊಳಗೊಂಡ ಈ ಕೇಂದ್ರೀಕೃತ ಪ್ರಾಧಿಕಾರ ಮಳೆ ಅನಾಹುತಗಳು, ಯೋಜನೆಗಳ ಅನುಷ್ಠಾನದಲ್ಲಿ ಆಗಬಹುದಾದ ವಿಳಂಬಗಳು, ನಗರ ಅಭಿವೃದ್ಧಿ ಹೆಸರಿನಲ್ಲಿ ಕಮಿಷನ್ ಲೂಟಿ ಹೊಡೆಯುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಹುಟ್ಟಡಗಿಸಲು ನೆರವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮೊನ್ನೆ ಸುರಿದ ಮಳೆಗೆ ನಾವು ಬೆಂಗಳೂರಿನಲ್ಲಿ ಕಳೆದುಕೊಂಡ ಮರಗಳೆಷ್ಟು? ಅವು ಯಾವ ಮರಗಳು? ಅವು ದುರ್ಬಲಗೊಂಡು ಬೀಳಲು ಬಿಬಿಎಂಪಿಗೆ ಕಾರಣ ಏನಾದರೂ ಗೊತ್ತಿದೆಯಾ? ಬಿಬಿಎಂಪಿ ಮರ ಸಮೀಕ್ಷೆಯನ್ನು ಯಾವತ್ತಾದರೂ ಮಾಡಿದೆಯಾ? ರಸ್ತೆ ನಿರ್ಮಾಣ, ವೈಟ್ ಟ್ಯಾಪಿಂಗ್ ಸಮಯದಲ್ಲಿ ಈ ಮರಗಳ ರಕ್ಷಣೆಗೆ ಏನಾದರೂ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೀರಾ ತಿಳಿಸಿ ಎಂದು ಟ್ವೀಟ್‌ನಲ್ಲಿ ಸದಾನಂದಗೌಡ ಬಿಬಿಎಂಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News