ಫ್ಯಾಲ್ಕನ್ ಟಯರ್ಸ್‌ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-05-28 14:48 GMT

ಬೆಂಗಳೂರು, ಮೇ 28: ಮೈಸೂರಿನ ರೋಗಗ್ರಸ್ತ ಕಾರ್ಖಾನೆ ಫ್ಯಾಲ್ಕನ್ ಟಯರ್ಸ್ ಪುನಶ್ಚೇತನಕ್ಕೆ ಸರಕಾರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಫ್ಯಾಲ್ಕನ್ ಟಯರ್ಸ್‌ ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಕೈಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಫ್ಯಾಲ್ಕನ್ ಟಯರ್ಸ್‌ ಕಾರ್ಖಾನೆಯನ್ನು ಈಗ ಪುನರಾರಂಭಿಸಿದಲ್ಲಿ ಕಾರ್ಖಾನೆಯನ್ನು ನಡೆಸಲು ಸುಮಾರು 3700 ತಾಂತ್ರಿಕ ಪರಿಣಿತಿಯನ್ನು ಹೊಂದಿರುವ ಕಾರ್ಮಿಕರು ಮುಂದೆ ಬಂದಿದ್ದು, ಕಾರ್ಖಾನೆಯನ್ನು ಪ್ರಾರಂಭಿಸಲು ಸುಮಾರು 120 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿ ಹಾಗೂ ಕಚೇರಿಯ ಮೂಲಭೂತ ಸೌಕರ್ಯಕ್ಕಾಗಿ 20 ಕೋಟಿ ರೂ.ಗಳ ವೆಚ್ಚದ ಅಗತ್ಯವಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಇದಲ್ಲದೆ 150 ಕೋಟಿ ರೂ.ಗಳ ದುಡಿಯುವ ಬಂಡವಾಳದ ಅಗತ್ಯವಿದೆ. ಕಾರ್ಖಾನೆಗೆ ವ್ಯವಸ್ಥಾಪಕ ಮಂಡಳಿಯನ್ನು ಸ್ಥಾಪಿಸುವ ಬಗ್ಗೆ ಪರಿಶೀಲಿಸಬಹುದಾಗಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಫ್ಯಾಲ್ಕನ್ ಟಯರ್ಸ್‌ ಕಾರ್ಖಾನೆಯನ್ನು ಪುನರಾರಂಭಿಸಲು ಸುಮಾರು 3700 ಕಾರ್ಮಿಕರು ಮುಂದೆ ಬಂದಿರುವುದು ಪ್ರಶಂಸನೀಯ ಎಂದ ಮುಖ್ಯಮಂತ್ರಿ, ಕಾರ್ಖಾನೆಯ ಪುನಶ್ಚೇತನಕ್ಕೆ ಎಲ್ಲ ನೆರವು ಒದಗಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್.ಪ್ರಸಾದ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಫ್ಯಾಲ್ಕನ್ ಟಯರ್ಸ್‌ ಕಾರ್ಖಾನೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News