ಮಹಿಳೆಗೆ ಬೆಲ್ಟ್ ನಲ್ಲಿ ಥಳಿಸಿದ ಮೂವರು ಪೊಲೀಸರ ವಜಾ: ವಿಡಿಯೋ ವೈರಲ್

Update: 2019-05-28 15:19 GMT

ಚಂಡೀಗಢ, ಮೇ 28: ಮಹಿಳೆಯೊಬ್ಬರನ್ನು ಪೊಲೀಸರು ಅಮಾನುಷವಾಗಿ ಥಳಿಸುತ್ತಿರುವ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಇಬ್ಬರು ಹೆಡ್‌ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಿದ್ದು ಮೂವರು ವಿಶೇಷ ಪೊಲೀಸ್ ಅಧಿಕಾರಿಗಳನ್ನು ತಕ್ಷಣದಿಂದಲೇ ಅನ್ವಯವಾಗುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಅಕ್ರಮ ನಿರ್ಬಂಧ, ಉದ್ದೇಶಪೂರ್ವಕವಾಗಿ ತೊಂದರೆ ನೀಡಿರುವುದು ಹಾಗೂ ಮಹಿಳೆಯ ಘನತೆಗೆ ಚ್ಯುತಿ ತರುವ ರೀತಿಯ ಮಾತು ಮತ್ತು ವರ್ತನೆಗಾಗಿ ಆರೋಪಿಗಳ ವಿರುದ್ಧ ಫರೀದಾಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಹೆಡ್‌ಕಾನ್‌ಸ್ಟೇಬಲ್‌ಗಳಾದ ಬಾಲದೇವ್ ಹಾಗೂ ರೋಹಿತ್‌ರನ್ನು ಅಮಾನತುಗೊಳಿಸುವಂತೆ ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳಾದ ಕೃಷನ್, ಹರ್ಪಾಲ್ ಮತ್ತು ದಿನೇಶ್‌ರನ್ನು ವಜಾಗೊಳಿಸುವಂತೆ ಫರೀದಾಬಾದ್ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಆದೇಶಿಸಿದ್ದಾರೆ.

 2018ರ ಅಕ್ಟೋಬರ್‌ನಲ್ಲಿ ಘಟನೆ ನಡೆದಿದ್ದು ಈ ಬಗ್ಗೆ ಮಹಿಳೆ ದೂರು ನೀಡಿರಲಿಲ್ಲ. ಆದರೆ ಕಳೆದ ಎರಡು ದಿನದಿಂದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಘಟನೆಯ ಬಗ್ಗೆ ವಿವರ ಸಂಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಹರ್ಯಾಣ ರಾಜ್ಯದ ಮಹಿಳಾ ಆಯೋಗ ಸೋಮವಾರ ರಾಜ್ಯ ಪೊಲೀಸ್ ಇಲಾಖೆಗೆ ದೂರು ನೀಡಿತ್ತು. ಇದೀಗ ಸಂತ್ರಸ್ತ ಮಹಿಳೆಯನ್ನು ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದ್ದು, ಮಹಿಳೆಯೊಂದಿಗೆ ಸಂಪರ್ಕ ಸಾಧಿಸಿದ ಬಳಿಕ ಆಕೆಯ ಹೇಳಿಕೆ ಪಡೆಯಲಾಗುವುದು ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News