'ರಾಜ್ಯದ 24,403 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ' !

Update: 2019-05-28 16:17 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 28: ರಾಜ್ಯದಲ್ಲಿ 24,403 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಜಿ.ಆರ್.ಶಿವಶಂಕರ್ ಆತಂಕ ವ್ಯಕ್ತಪಡಿಸಿದರು.

ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 62,580 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 24,403 ಅಂಗನವಾಡಿ ಕೇಂದ್ರಗಳಲ್ಲಿ ಸ್ವಂತ ಕಟ್ಟಡವಿಲ್ಲದೆ ಮಕ್ಕಳನ್ನು ಬೀದಿಯಲ್ಲಿ ಕೂರಿಸುತ್ತಾರೆ. ಇದೆಲ್ಲ ಸರಕಾರದ ಕಣ್ಣಿಗೆ ಕಾಣುತ್ತಿಲ್ಲ. ಅಲ್ಲದೆ, ರಾಜ್ಯ ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭ ಮಾಡುವ ಸಿದ್ಧತೆಯಲ್ಲಿ ಇದೆ ಎಂದು ವಿಷಾದಿಸಿದರು.

ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ತಜ್ಞರ ವರದಿಯನ್ನು ಸಂಪೂರ್ಣವಾಗಿ ಅಳವಡಿಸುವುದು ಅಗತ್ಯವಿದೆ. ತಜ್ಞರ ವರದಿಯನ್ನು ಅಳವಡಿಸದೇ ಅದರ ತದ್ವಿರುದ್ಧವಾಗಿ ಪ್ರಾಥಮಿಕ ಹಾಗೂ ಪೌಢ್ರ ಶಿಕ್ಷಣ ಇಲಾಖೆ ಆದೇಶ ಮಾಡಿದೆ. ಆದ್ದರಿಂದ ತಜ್ಞರು ಮಾಡಿರುವ ಆದೇಶವನ್ನು ಸಂಪೂರ್ಣವಾಗಿ ಅಳವಡಿಸಿ ಅದಕ್ಕನುಗುಣವಾಗಿ ಆದೇಶ ಮಾಡುವ ಅನಿವಾರ್ಯತೆಯಿದೆ ಎಂದರು.

ರಾಜ್ಯದ 30 ಜಿಲ್ಲೆಗಳಲ್ಲಿ, ಸರಕಾರಿ ಶಾಲೆಗಳ ಸಬಲೀಕರಣ ಸಮಿತಿ ವರದಿಯ 17 ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪೂರ್ವ ಪ್ರಾಥಮಿಕ ಸವಲತ್ತು ವಿಸ್ತರಿಸಿ ಅನುಷ್ಠಾನಗೊಳಿಸಬೇಕು. ಅಲ್ಲದೆ, ಈ ರೀತಿ ಅವೈಜ್ಞಾನಿಕವಾಗಿ ಮಾಡಿರುವ ಸರಕಾರಿ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, 10ನೇ ತರಗತಿ ಉತ್ತೀರ್ಣರಾಗಿದ್ದರೆ ಅಂತಹ ಕಾರ್ಯಕರ್ತೆಯರನ್ನು ಸರಕಾರವು ತನ್ನ ವೆಚ್ಚದಲ್ಲಿ ನರ್ಸರಿ ಶಿಕ್ಷಕರ ತರಬೇತಿಯನ್ನು ನೀಡಿ ಮುಂಬರುವ ವರ್ಷಗಳಲ್ಲಿ ಅವರನ್ನು ಸರಕಾರಿ ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ವಿಭಾಗಕ್ಕೆ ಶಿಕ್ಷಕಿಯನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಸರಕಾರ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆಯಲು ಒತ್ತಾಯಿಸಿ ಜೂ.10ರಂದು ನಗರದ ಪುರಭವನದ ಮುಂದೆ ಪ್ರತಿಭಟನೆ ಮಾಡಲಾಗುತ್ತದೆ.

-ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News