ಉಪನ್ಯಾಸಕ, ಶಿಕ್ಷಕರಾಗಿರುವ ಸಂಸದರು, ಶಾಸಕರು ಬೋಧನೆ ಮುಂದುವರಿಸಬಹುದು: ಯುಜಿಸಿ

Update: 2019-05-28 16:30 GMT

ಹೊಸದಿಲ್ಲಿ, ಮೇ.28: ವೃತ್ತಿಯಲ್ಲಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಶಿಕ್ಷಕರಾಗಿರುವ ಸಂಸದರು ಮತ್ತು ಶಾಸಕರು ತಮ್ಮ ಬೋಧನ ವೃತ್ತಿಯನ್ನು ಮುಂದುವರಿಸಬಹುದು ಎಂದು ವಿಶ್ವವಿದ್ಯಾನಿಲಯ ದತ್ತಿ ಆಯೋಗ (ಯುಜಿಸಿ) ತಿಳಿಸಿದೆ.

ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಚುನಾಯಿತರಾಗಿರುವ ಸಂಸದರಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚೇನೂ ಇಲ್ಲ. ಬೋಧನೆ ಮುಂದುವರಿಸುವ ಸಂಸದರು ಮತ್ತು ಶಾಸಕರಿಗೆ ಅವರ ವೇತನದ ಜೊತೆಗೆ ಅವರು ಪ್ರತಿನಿಧಿಸುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಯಿಂದಲೂ ವೇತನ ನೀಡಲಾಗುವುದು ಎಂದು ಯುಜಿಸಿ ತಿಳಿಸಿದೆ. ಈ ಸಂಸದರು ಮತ್ತು ಶಾಸಕರು ಅಧಿವೇಶನಗಳಲ್ಲಿ ಭಾಗವಹಿಸಲು ತೆರಳುವ ದಿನಗಳಲ್ಲೂ ಅವರು ಶೈಕ್ಷಣಿಕ ಸಂಸ್ಥೆಯಲ್ಲಿ ಹಾಜರಿದ್ದರು ಎಂದೇ ಗುರುತಿಸಬೇಕು ಎಂದು ಯುಜಿಸಿ ತಿಳಿಸಿದೆ.

ಶಾಸಕರ ಅಥವಾ ಸಂಸದರಾಗಿದ್ದು ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಬಯಸುವವರಿಗೆ ಅವಕಾಶ ನೀಡಬೇಕು. ಹೀಗೆ ಬೋಧನಾ ವೃತ್ತಿ ಮುಂದುವರಿಸುವ ಶಾಸಕ ಅಥವಾ ಸಂಸದರಿಗೆ ಸಂಬಂಧಿತ ಸಂಸ್ಥೆಗಳಲ್ಲಿ ಯಾವುದೇ ಆಡಳಿತಾತ್ಮಕ ಹುದ್ದೆಯನ್ನು ನೀಡಬಾರದು ಎಂಬ ರಾಜ್ಯ ಸಭಾ ಸಮಿತಿಯ ಪ್ರಸ್ತಾವನೆಯನ್ನು ಒಪ್ಪಿದ ಮೋದಿ ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ. ನೂತನವಾಗಿ ಆಯ್ಕೆಯಾಗಿರುವ ಸಂಸದರಲ್ಲಿ ಕೇವಲ ಎಂಟು ಮಂದಿ ಶಿಕ್ಷಣ ಕ್ಷೇತ್ರದ ನಂಟು ಹೊಂದಿದ್ದು ಅವರಲ್ಲಿ ಇಬ್ಬರು ಮಾತ್ರ ಕಾಲೇಜು ಉಪನ್ಯಾಸಕರಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News