ಉತ್ತರಪ್ರದೇಶದಲ್ಲಿ ಮತ್ತೊಂದು ಕಳ್ಳಭಟ್ಟಿ ದುರಂತ: 14 ಮಂದಿ ಮೃತ್ಯು

Update: 2019-05-29 05:29 GMT

ಲಕ್ನೋ: ಒಂದೇ ಕುಟುಂಬದ ನಾಲ್ಕು ಮಂದಿ ಸೇರಿದಂತೆ 14 ಮಂದಿ ಕಳ್ಳಭಟ್ಟಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

ವಿಷಪೂರಿತ ಮದ್ಯ ಸೇವಿಸಿ ತೀವ್ರ ಅಸ್ವಸ್ಥರಾಗಿರುವ ಇತರ 42 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಣಿಗಂಜ್ ಗ್ರಾಮದ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿರುವುದನ್ನಷ್ಟೇ ಜಿಲ್ಲಾಡಳಿತ ದೃಢಪಡಿಸಿದೆ. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನೆರವೇರಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಇದು ರಾಜಕೀಯ ಪಿತೂರಿಯಾಗಿರಬಹುದೇ ಎಂಬ ಆಯಾಮದ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನೂ ಅವರು ಘೋಷಿಸಿದ್ದಾರೆ. ಅಸ್ವಸ್ಥರಾಗಿರುವವರಿಗೆ ಸೂಕ್ತ ವೈದ್ಯಕೀಯ ಆರೈಕೆಗೆ ಕ್ರಮ ಕೈಗೊಳ್ಳುವಂತೆಯೂ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಣಿಗಂಜ್ ಗ್ರಾಮದಲ್ಲಿರುವ ಸರ್ಕಾರದ ಅಧಿಕೃತ ಮಳಿಗೆಗಳಿಂದಲೇ ಪವರ್ ಹೌಸ್ ಮತ್ತು ವಿಂಡೀಸ್ ಎಂಬ ಎರಡು ಬ್ರಾಂಡ್‌ಗಳ ಮದ್ಯವನ್ನು ಖರೀದಿಸಿ ಸೇವಿಸಿದ ಬಳಿಕ ಈ ಗ್ರಾಮಗಳ ಬಹಳಷ್ಟು ಮಂದಿ ಅಸ್ವಸ್ಥರಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯ ಬಳಿಕ ಈ ಪ್ರದೇಶದಲ್ಲಿ ಎರಡು ಬ್ರಾಂಡ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಬ್ಕಾರಿ ಇಲಾಖೆ ಸಲಹೆ ಮಾಡಿದೆ. ಈ ಎರಡು ಬ್ರಾಂಡ್‌ಗಳ ಮದ್ಯವನ್ನು ವಶಪಡಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಅರವಿಂದ್ ಸಿಂಗ್ ಗೋಪ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News