ಸಾವರ್ಕರ್ ಜನ್ಮದಿನಾಚರಣೆಯಂದು ಮಕ್ಕಳಿಗೆ ಚೂರಿ ವಿತರಿಸಿದ ಹಿಂದೂ ಮಹಾಸಭಾ !

Update: 2019-05-29 09:08 GMT

ಆಗ್ರಾ : ಹಿಂದೂ ಮಹಾಸಭಾ ನಾಯಕ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜನ್ಮದಿನಾಚರಣೆಯ ಸ್ಮರಣಾರ್ಥ ಮಂಗಳವಾರ ನಡೆದ ಸಮಾರಂಭವೊಂದರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ 10ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚೂರಿಗಳನ್ನು ವಿತರಿಸಿದೆ.

''ರಾಜನೀತಿ ಕಾ ಹಿಂದೂಕರಣ್ ಹಾಗೂ ಹಿಂದೂವೋಂ ಕಾ ಸೈನಿಕೀಕರಣ್''  ಸಾವರ್ಕರ್ ಅವರ ಕನಸಾಗಿತ್ತು. ಲೋಕಸಭೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಮೋದೀ ಜಿ ಸಾವರ್ಕರ್ ಅವರ ಮೊದಲ ಕನಸನ್ನು ಈಡೇರಿಸಿದ್ದಾರೆ, ನಾವೀಗ ಚಾಕುಗಳನ್ನು ವಿತರಿಸಿ ಹಿಂದೂ ಸೈನಿಕರನ್ನು ಸೃಷ್ಟಿಸುವ ಮೂಲಕ ಸಾವರ್ಕರ್ ಅವರ ಇನ್ನೊಂದು ಕನಸನ್ನು ಈಡೇರಿಸುತ್ತಿದ್ದೇವೆ'' ಎಂದು ಹಿಂದೂ ಮಹಾಸಭಾ ವಕ್ತಾರ ಅಶೋಕ್ ಪಾಂಡೆ ಹೇಳಿದ್ದಾರೆ.

''ಹಿಂದೂಗಳು ತಮ್ಮನ್ನು ರಕ್ಷಿಸಿಕೊಳ್ಳುವುದರ ಜತೆಗೆ ತಮ್ಮ ದೇಶವನ್ನೂ ರಕ್ಷಿಸಬೇಕಿದ್ದರೆ ಅವರು ಶಸ್ತ್ರಗಳನ್ನು ಬಳಸಲು ಕಲಿಯಬೇಕು,'' ಎಂದು ಪಾಂಡೆ ಹೇಳಿದರು.

ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಾತನಾಡಿ ''ಹಿಂದೂಗಳನ್ನು ಪ್ರೇರೇಪಿಸಿ ಅವರ ಸಬಲೀಕರಣಗೊಳಿಸಲು, ಮುಖ್ಯವಾಗಿ ಯುವಜನತೆ ತಮ್ಮನ್ನು ರಕ್ಷಿಸಿಕೊಳ್ಳಲು ಇದೊಂದು ಹೆಜ್ಜೆಯಾಗಿದೆ'' ಎಂದು ಹೇಳಿದರು.

ಈ ಚಾಕುಗಳನ್ನು ಭಗವದ್ಗೀತೆಯ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರಿದ ಅಪ್ರಾಪ್ತ ಮಕ್ಕಳಿಗೆ ನೀಡಲಾಗಿದ್ದು ಯಾವಾಗ ಹೇಗೆ ಈ ಆಯುಧ ಬಳಸಬೇಕೆಂಬುದನ್ನು ಅವರು ಅರಿಯಬೇಕು ಎಂದು ಅವರು ತಿಳಿಸಿದರು.

ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹಲವಿದ್ದು ಅವರಿಗೆ ತಮ್ಮ ಆತ್ಮ ರಕ್ಷಣೆಗಾಗಿ ಚಾಕುಗಳನ್ನು ಹೇಗೆ ಬಳಸಬೇಕೆಂಬ ಬಗ್ಗೆ ತರಬೇತಿ ನೀಡಬೇಕು ಎಂದು ಪಾಂಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News