ವಿವಾಹ ನೆರವೇರಿಸಿದ ಅರ್ಚಕನೊಂದಿಗೆ ಪರಾರಿಯಾದ ನವವಧು!

Update: 2019-05-29 11:54 GMT

ಭೋಪಾಲ್, ಮೇ 29: ತನ್ನ ವಿವಾಹದ ವಿಧಿವಿಧಾನಗಳನ್ನು ನೆರವೇರಿಸಿದ ಅರ್ಚಕನೊಂದಿಗೆ ನವವಿವಾಹಿತೆಯೊಬ್ಬಳು ಪರಾರಿಯಾದ ಘಟನೆ ಮಧ್ಯ ಪ್ರದೇಶದ ವಿದಿಶ ಜಿಲ್ಲೆಯ ಸಿರೊಂಜ್ ಎಂಬಲ್ಲಿಂದ ವರದಿಯಾಗಿದೆ.

ಇಪ್ಪತ್ತೊಂದು ವರ್ಷ ವಯಸ್ಸಿನ ಯುವತಿಯ ವಿವಾಹ ಅಸತ್ ಗ್ರಾಮದ ನಿವಾಸಿಯೊಬ್ಬನೊಂದಿಗೆ ಮೇ 7ರಂದು ನಡೆದಿತ್ತು. ವಿವಾಹದ ನಂತರ ಯುವತಿ ಕೆಲವೊಂದು ಧಾರ್ಮಿಕ ಪ್ರಕ್ರಿಯೆಗಳಿಗಾಗಿ ತನ್ನ ಹೆತ್ತವರ ಮನೆಗೆ ಆಗಮಿಸಿದ್ದಳು, ಆದರೆ ಮೇ 23ರಂದು ಆಕೆ ರೂ 30,000 ನಗದು ಹಾಗೂ ರೂ 1.5 ಲಕ್ಷ ಮೌಲ್ಯದ ಚಿನ್ನಾಭರಣಗಳೊಂದಿಗೆ ಅರ್ಚಕನೊಂದಿಗೆ ಪರಾರಿಯಾಗಿದ್ದಾಳೆ.

ಯುವತಿ ನಾಪತ್ತೆಯಾದ ಎರಡು ದಿನಗಳ ನಂತರ ಬೇರೊಂದು ವಿವಾಹದ ವಿಧಿವಿಧಾನ ನೆರವೇರಿಸಲು ಗ್ರಾಮಸ್ಥರು ಅರ್ಚಕನನ್ನು ಹುಡುಕಿಕೊಂಡು ಬಂದಾಗ ಆತನೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಕುರಿತಂತೆ ಪೊಲೀಸ್ ದೂರು ನೀಡಲಾಗಿದೆ.

ಅರ್ಚಕ ವಿವಾಹಿತನಾಗಿದ್ದು, ಮೂರು ಮಕ್ಕಳ ತಂದೆಯಾಗಿದ್ದಾನೆ. ಆತನಿಗೂ ಯುವತಿಗೂ ಕಳೆದೆರಡು ವರ್ಷಗಳಿಂದ ಪ್ರೇಮ ವ್ಯವಹಾರವಿತ್ತೆಂದು ಶಂಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News