ಮಳೆ ಕೊರತೆಗೆ ಮೋಡ ಬಿತ್ತನೆಯಿಂದ ಪರಿಹಾರ: ಸಚಿವ ಕೃಷ್ಣಭೈರೇಗೌಡ

Update: 2019-05-30 15:04 GMT

ಬೆಂಗಳೂರು ಮೇ 30: ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆಯಿಂದ ಬರದ ಪರಿಸ್ಥಿತಿಯನ್ನು ಎದುರಿಸುತ್ತಿರುವ ರಾಜ್ಯಕ್ಕೆ ಮೋಡ ಬಿತ್ತನೆಯ ಮೂಲಕ ಸ್ವಲ್ಪ ಮಟ್ಟಿಗಿನ ಪರಿಹಾರ ಕಂಡುಕೊಳ್ಳಬಹುದಾಗಿದೆ. ಮೋಡ ಬಿತ್ತನೆಯ ಸಮರ್ಥ ನಿರ್ವಹಣೆಯ ಮೂಲಕ ಬರ ಪರಿಸ್ಥಿತಿಯನ್ನು ಎದುರಿಸಬಹುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಗುರುವಾರ ರಾಜ್ಯ ಸರಕಾರ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಐಎಂಡಿ ಮತ್ತು ಭೂಗರ್ಭ ವಿಜ್ಞಾನ ಇಲಾಖೆ ಜಂಟಿಯಾಗಿ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾದ ಮೋಡ ಬಿತ್ತನೆ ಕುರಿತ ಮೊದಲ ಅಂತರ್‌ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಕಳೆದ 19 ವರ್ಷಗಳಲ್ಲಿ ತೀವ್ರ ಮಳೆ ಕೊರತೆಯನ್ನು ಅನುಭವಿಸಿದ್ದು, ಕುಡಿಯುವ ನೀರಿನ ಜೊತೆಗೆ ಬೆಳೆ ಮತ್ತು ಸಾಮಾನ್ಯ ಜನ ಜೀವನಕ್ಕೆ ಸಾಕಷ್ಟು ಹಾನಿ ಉಂಟಾಗಿದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಮಳೆಯ ಲಭ್ಯತೆಯೂ ಕೂಡ ಭಿನ್ನವಾಗಿದೆ. ಮಳೆಯ ಲಭ್ಯತೆಯ ಪರಿಣಾಮ ಶೇ.65ಕ್ಕೆ ಇಳಿದಿದೆ. ರಾಜ್ಯದ ಭೌಗೋಳಿಕ ವೈವಿಧ್ಯತೆಯಿಂದಾಗಿ ವಾತಾವರಣದಲ್ಲೂ ಬದಲಾವಣೆ ಕಂಡು ಬಂದಿದೆ ಎಂದು ಅವರು ತಿಳಿಸಿದರು.

ಹಲವು ಕಡೆ ಪ್ರವಾಹ ಬಂದರೆ ಮತ್ತೆ ಹಲವು ಕಡೆ ತೀವ್ರ ಬರ ಎದುರಿಸಬೇಕಾಗಿದೆ. ವಾತಾವರಣದ ಈ ಬದಲಾವಣೆಯನ್ನು ನಾವು ವೈಜ್ಞಾನಿಕವಾಗಿ ಪರಿಣಾಮಕಾರಿ ವಿಧಾನಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕರ್ನಾಟಕದ 6000ಕ್ಕೂ ಹೆಚ್ಚಿನ ಗ್ರಾಮ ಪಂಚಾಯತ್‌ಗಳಲ್ಲಿ ಮಳೆ ಮಾಪನ ಕೇಂದ್ರಗಳು (ಟೆಲಿಮೆಟ್ರಿಕ್ ಸಿಸ್ಟಮ್) ಇದ್ದು, ಮಳೆ ಪ್ರಮಾಣವನ್ನು ನಿಖರವಾಗಿ ಕಂಡುಕೊಳ್ಳಲು ಸಾಧ್ಯವಾಗಿದೆ. ಬೇರೆ ಯಾವುದೇ ರಾಜ್ಯಗಳಿಗಿಂತ ಹೆಚ್ಚು ವೆಜ್ಞಾನಿಕವಾಗಿ ಮತ್ತು ಶಿಸ್ತುಬದ್ಧ ವಿಧಾನದ ಮೂಲಕ ಮಳೆ ಮಾಪನವನ್ನು ರಾಜ್ಯದಲ್ಲಿ ಕಂಡುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.

ತಜ್ಞರ ಸಮಿತಿಯ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಮಳೆ ಕೊರತೆಯನ್ನು ಎದುರಿಸಲು 2017ರಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಂಡು ಯಶಸ್ಸು ಪಡೆಯಲಾಗಿತ್ತು. ಈ ಮೂಲಕ 2.51 ಟಿಎಂಸಿಯಿಂದ 5 ಟಿಎಂಸಿ ನೀರಿನ ಹೆಚ್ಚಳ ಕಂಡು ಬಂದಿತ್ತು. ಶೇ.27ರಷ್ಟು ಮಳೆಯನ್ನು ಮೋಡ ಬಿತ್ತನೆಯಿಂದ ಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಪ್ರಸ್ತುತ ರಾಜ್ಯದ ವಿವಿಧ ಪ್ರದೇಶದ ಮಳೆಯ ಪ್ರಮಾಣ 408 ಮಿಲಿ ಲೀಟರ್‌ನಿಂದ 5051 ಮಿಲಿ ಲೀಟರ್‌ನಷ್ಟಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೇವಲ ಶೇ.23ರಷ್ಟಿದ್ದು, ಆತಂಕದ ಪರಿಸ್ಥಿತಿ ಇದೆ. ರಾಜ್ಯದ 10.5 ಮಿಲಿಯನ್ ಹೆಕ್ಟೆರ್ ಪ್ರದೇಶದಲ್ಲಿ 7.01 ಮಿಲಿಯನ್ ಹೆಕ್ಟೆರ್ ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆ ಕೈಕೊಟ್ಟರೆ ತೀವ್ರ ಬರದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಎಲ್ಲಾ ಹಿನ್ನೆಲೆಯಲ್ಲಿ ಮೋಡ ಬಿತ್ತನೆಯ ಮೂಲಕ ಮಳೆ ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮೂರು ರೆಡಾರ್‌ಗಳನ್ನು ಬಳಸಿ, ಎರಡು ವಿಮಾನಗಳ ಮೂಲಕ ಬೆಂಗಳೂರು ಮತ್ತು ಹುಬ್ಬಳ್ಳಿ ಎರಡೂ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು. ಇದನ್ನು ಯಶಸ್ವಿಗೊಳಿಸಲು ಮಾನಿಟರಿಂಗ್ ಮತ್ತು ಅಡ್ವೈಸರಿ ಕಮಿಟಿ, ಟೆಕ್ನಿಕಲ್‌ಎಕ್ಸಪರ್ಟ್ ಕಮಿಟಿ, ಇಂಪ್ಲಿಮೆಂಟೆಷನ್ ಟೀಂ ಮತ್ತು ಇವ್ಯಾಲ್ಯುಯೇಷನ್ ಕಮಿಟಿಗಳನ್ನು ರಚಿಸಲಾಗಿದೆ. 

ಮೋಡ ಬಿತ್ತನೆ ಒಂದೇ ಬರಕ್ಕೆ ಪರಿಹಾರವಲ್ಲ. ನಾವು ದೀರ್ಘ ಕಾಲಿನ ಯೋಜನೆಗಳ ಮೂಲಕ ಬರದ ಸಮರ್ಥ ನಿರ್ವಹಣೆಗೆ ಪ್ರಯತ್ನಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಜಲಾಮೃತ ಎನ್ನುವ ಯೋಜನೆಯ ಮೂಲಕ ಶಾಶ್ವತ ನೀರಾವರಿ ಪರಿಹಾರ ಕ್ರಮಗಳನ್ನು ಸಹ ಕೈಗೊಳ್ಳುತ್ತಿದ್ದೇವೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ದಿ ಆಯುಕ್ತೆ ಡಾ.ವಂದಿತಾ ಶರ್ಮ, ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್, ಇಲಾಖೆಯ ಮುಖ್ಯ ಎಂಜಿನಿಯರ್ ಪ್ರಕಾಶ್ ಸೇರಿದಂತೆ ಹಿರಿಯ ಅಧಿಕಾರಿಗಳು, ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News