ಪ್ರತಿ ದಿನ 40 ಕಿಮೀ ದೂರದ ಕಾಲೇಜಿಗೆ ಪಯಣಿಸುತ್ತಿದ್ದ ವಿದ್ಯಾರ್ಥಿನಿ ರಾಜ್ಯಕ್ಕೆ ಟಾಪರ್

Update: 2019-05-31 11:45 GMT
ಚಿತ್ರ ಕೃಪೆ: HT

ಡೆಹ್ರಾಡೂನ್: ಗುರುವಾರ ಪ್ರಕಟವಾದ ಉತ್ತರಾಖಂಡ ರಾಜ್ಯದ 12ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಉತ್ತರಕಾಶಿ ಜಿಲ್ಲೆಯ ಚಿನ್ಯಲಿಸೌರ್ ಗ್ರಾಮದ ಸರಸ್ವತಿ ವಿದ್ಯಾ ಮಂದಿರ್ ಇಂಟರ್ ಕಾಲೇಜು ವಿದ್ಯಾರ್ಥಿನಿ ಶತಾಕ್ಷಿ ತಿವಾರಿ. ಹದಿನಾರು ವರ್ಷದ ಈ ಬಾಲಕಿ 500ರಲ್ಲಿ 490 ಅಂಕಗಳನ್ನು ಗಳಿಸಿ ಶೇ. 98 ಫಲಿತಾಂಶ ದಾಖಲಿಸಿದ್ದಾಳೆ.

ಪ್ರತಿ ದಿನ ಮನೆಯಿಂದ ಕಾಲೇಜಿಗೆ ಹಾಗೂ ಮತ್ತೆ ಮನೆಗೆ ಹೀಗೆ 40 ಕಿಮೀ ದೂರ ಪ್ರಯಾಣಿಸುತ್ತಿದ್ದ ಈಕೆ ತನ್ನ ಉಳಿದ ಸಮಯವನ್ನು ವ್ಯರ್ಥಗೊಳಿಸದೆ ಸಂಪೂರ್ಣವಾಗಿ ತನ್ನ ಕಲಿಕೆಗೆ ಮೀಸಲಿರಿಸಿದ್ದಳು. ತನ್ನ ಜೀವನದ ಮುಂದಿನ ಗುರಿಯ ಬಗ್ಗೆ ಈಕೆಯಲ್ಲಿ ಸ್ಪಷ್ಟತೆಯಿದೆ.

ಈಗ ಜೆಇಇ ಮೈನ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಶತಾಕ್ಷಿ ಮುಂದೆ ಖಗೋಳ ಭೌತವಿಜ್ಞಾನಿಯಾಗುವ ಕನಸು ಹೊಂದಿದ್ದಾಳೆ.

ಯಾವುದೇ ಕೋಚಿಂಗ್ ಪಡೆಯದೆ ಸ್ವಂತ ಶ್ರಮದಿಂದ ಹಾಗೂ ಶಿಕ್ಷಕರ ಬೆಂಬಲದಿಂದ ಕಲಿತ ಈಕೆ ಗಣಿತದಲ್ಲಿ ಶೇ 100 ಅಂಕ ಗಳಿಸಿದ್ದರೆ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಶೇ. 99 ಅಂಕ ಗಳಿಸಿದ್ದಾಳೆ.

"ಪ್ರತಿ ದಿನ ಬೆಳಗ್ಗೆ ಬೇಗನೇ ಏಳುತ್ತಿದ್ದೆ, ತಡ ರಾತ್ರಿವರೆಗೂ ಓದುತ್ತಿದ್ದೆ. ಕ್ಯಾಲೆಂಡರ್ ಸಿದ್ಧಪಡಿಸಿ ಯಾವಾಗ ಏನು ಕಲಿಯಬೇಕೆಂಬುದನ್ನು ಬರೆದಿಡುತ್ತಿದ್ದೆ. ಕಲಿತಿದ್ದನ್ನು ಬೇಗನೇ ಮರೆಯುತ್ತಿದ್ದುದರಿಂದ ಮತ್ತೆ ಮತ್ತೆ ಅಭ್ಯಸಿಸಬೇಕಿತ್ತು,'' ಎಂದು ಆಕೆ  ಹೇಳುತ್ತಾಳೆ.

ಶತಾಕ್ಷಿಯ ತಂದೆ ಅನುಪ್ ತಿವಾರಿ ಸಿವಿಲ್ ಇಂಜಿನಿಯರ್ ಆಗಿದ್ದು ತಾಯಿ ಸುನೀತಾ ತಿವಾರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. "ಕ್ರಮಬದ್ಧವಾಗಿ ಕಲಿಯುತ್ತಿದ್ದುದೇ ಆಕೆಯ ಯಶಸ್ಸಿಗೆ ಕಾರಣ,'' ಎಂದು ಶತಾಕ್ಷಿಯ ತಂದೆ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News