​ದೇಶದಲ್ಲಿ ನಿರುದ್ಯೋಗ 45 ವರ್ಷಗಳಲ್ಲೇ ಅತ್ಯಧಿಕ

Update: 2019-06-01 03:39 GMT

ಹೊಸದಿಲ್ಲಿ, ಜೂ.1: ಭಾರತದ ಶ್ರಮಶಕ್ತಿಯ ಶೇಕಡ 6ರಷ್ಟು ಮಂದಿ 2017-18ರಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ. ದೇಶದಲ್ಲಿ ನಿರುದ್ಯೋಗ ಪ್ರಮಾಣ, ಕಳೆದ ಜನವರಿಯಲ್ಲಿ ಸೋರಿಕೆಯಾದ ಅಂಕಿಅಂಶಕ್ಕೆ ತಾಳೆಯಾಗುತ್ತಿದ್ದು, 45 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದ ನಿರುದ್ಯೋಗ ಇರುವುದು ದೃಢಪಟ್ಟಿದೆ.

ಜನವರಿಯಲ್ಲಿ ಸೋರಿಕೆಯಾದ ವರದಿ ವ್ಯಾಪಕ ವಿವಾದ ಹುಟ್ಟುಹಾಕಿತ್ತು. ಸರ್ಕಾರ ಉದ್ಯೋಗ ಸೃಷ್ಟಿಗೆ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದು, ಉದ್ಯೋಗಕ್ಕೆ ಸಂಬಂಧಿಸಿದ ವರದಿಯನ್ನು ಸರ್ಕಾರ ಮುಚ್ಚಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದವು. ಆದರೆ ಈ ವರದಿ ಕೇವಲ ಕರಡು ಪ್ರತಿ; ಅಂತಿಮವಲ್ಲ ಎಂದು ಸರ್ಕಾರ ತಳ್ಳಿಹಾಕಿತ್ತು.

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಓ) ಶುಕ್ರವಾರ ಬಿಡುಗಡೆ ಮಾಡಿದ ಹೊಸ ಕಾರ್ಮಿಕ ಬಲ ಸಮೀಕ್ಷೆಯ ವರದಿಯಲ್ಲಿ, ಉದ್ಯೋಗ ಹಾಗೂ ನಿರುದ್ಯೋಗವನ್ನು ವಾರ್ಷಿಕವಾಗಿ ಮಾಪನ ಮಾಡುವ ಹೊಸ ಸರಣಿ ಇದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ಇದನ್ನು ಹಿಂದಿನ ವರದಿಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮುಖ್ಯ ಅಂಕಿಅಂಶಗಳ ಅಧಿಕಾರಿ ಪ್ರವೀಣ್ ಶ್ರೀವಾಸ್ತವ ಸಮರ್ಥಿಸಿಕೊಂಡಿದ್ದಾರೆ. ಮೋದಿ ಸರ್ಕಾರ ಎರಡನೇ ಬಾರಿಗೆ ಅಧಿಕಾರ ಸೂತ್ರ ಹಿಡಿದ ಮರುದಿನವೇ ಈ ವರದಿ ಪ್ರಕಟವಾಗಿದ್ದು, ವರದಿಯನ್ನು ಬಿಡುಗಡೆ ಮಾಡದಂತೆ ರಾಜಕೀಯ ಒತ್ತಡ ಇತ್ತು ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ.

ವರದಿಯ ಪ್ರಕಾರ 2017-18ರಲ್ಲಿ ಶೇಕಡ 5.7ರಷ್ಟಿದ್ದು, ಪುರುಷರ ನಿರುದ್ಯೋಗ ಪ್ರಮಾಣ 6.2% ಆಗಿದೆ. ನಗರ ಪ್ರದೇಶಗಳಲ್ಲಿ ನಿರುದ್ಯೋಗಿ ಮಹಿಳೆಯರ ಪ್ರಮಾಣ 10.8% ಇದ್ದರೆ, ಪುರುಷರ ಪ್ರಮಾಣ 7.1% ಇದೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಕ್ರಮವಾಗಿ 6.8% ಮತ್ತು 3.8% ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News