ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅನ್ಯಾಯ: ಶಾಮನೂರು ಶಿವಶಂಕರಪ್ಪ

Update: 2019-06-01 12:27 GMT

ಬೆಂಗಳೂರು, ಜೂ. 1: ಕೇಂದ್ರ ಸಚಿವ ಸಂಪುಟದಲ್ಲಿ ವೀರಶೈವ ಲಿಂಗಾಯತರಿಗೆ ಅನ್ಯಾಯವಾಗಿದೆ. ರಾಜ್ಯ ಪ್ರತಿನಿಧಿಸುತ್ತಿರುವ ಲಿಂಗಾಯತ ಸಮುದಾಯದ ಸುರೇಶ್ ಅಂಗಡಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕಿತ್ತು ಎಂದು ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದಿಂದ ವೀರಶೈವ ಲಿಂಗಾಯತ ಸಮುದಾಯದ 9 ಸಂಸದರು ಆಯ್ಕೆಯಾಗಿದ್ದಾರೆ. ವೀರಶೈವ ಲಿಂಗಾಯತರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಲಿಂಗಾಯತ ಸಮುದಾಯದ ಮತಗಳಿಂದ 24 ಮಂದಿ ಸಂಸದರನ್ನು ಆಯ್ಕೆ ಮಾಡಲಾಗಿದೆ. ಸಮುದಾಯಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿವೆ. ಕೇಂದ್ರ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದು ಶಾಮನೂರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ರಾಜ್ಯ ಪ್ರತಿನಿಧಿಸುತ್ತಿರುವ ಲಿಂಗಾಯತ ಸಮುದಾಯಕ್ಕೆ ಇನ್ನೂ 2 ಅಥವಾ 3 ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ ಅವರು, ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದ್ದು, ತುಳಿಯಲಾಗುತ್ತಿದೆ ಎಂದು ದೂರಿದರು.

ಮೈತ್ರಿ ಮುಂದುವರಿಯಲಿದೆ: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪೂರ್ಣಾವಧಿ ಇರುವುದು ಕಷ್ಟ. ಈ ಮೈತ್ರಿ ಸರಕಾರ ಮುಂದುವರಿಯಲಿದೆ. ಕಾಂಗ್ರೆಸ್ ಹಿರಿಯರ ಸಭೆಯಲ್ಲಿ ಹಲವು ರೀತಿ ಅಭಿಪ್ರಾಯ ವ್ಯಕ್ತವಾಗಿದ್ದು, ಕೆಲವರು ಮೈತ್ರಿ ಬೇಕು ಅಂದರು, ಕೆಲವರು ಬೇಡ ಅಂದಿದ್ದಾರೆ ಎಂದರು.

ವಿಶೇಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಮುಂದುವರಿಸುವ ಬಗ್ಗೆ ಒಲವು ವ್ಯಕ್ತಪಡಿಸಿದರು ಎಂದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದರೂ ಹೀನಾಯ ಸೋಲಿನ ಹಲವು ಕಾರಣಗಳಿಗೆ ಎಂದು ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News