ತಂಬಾಕು ದುಷ್ಪರಿಣಾಮದ ಕುರಿತು ಕೃಷಿಕರಿಗೆ ಜಾಗೃತಿ ಶಿಬಿರ: ಜಿಕೆವಿಕೆ ಕುಲಪತಿ ಡಾ.ರಾಜೇಂದ್ರ ಪ್ರಸಾದ್

Update: 2019-06-01 16:50 GMT

ಬೆಂಗಳೂರು, ಜೂ.1: ತಂಬಾಕು ಉತ್ಪನ್ನಗಳಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಕೃಷಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ತರಬೇತಿ ಶಿಬಿರ ನಡೆಸಲಾಗುವುದು ಎಂದು ಬೆಂಗಳೂರು ಕೃಷಿ ವಿವಿ(ಜಿಕೆವಿಕೆ) ಕುಲಪತಿ ಡಾ.ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.

ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ತಂಬಾಕು ರಹಿತ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರಿಗೆ ಕ್ಯಾನ್ಸರ್ ಬಗೆಗೆ ಸರಿಯಾದ ಮಾಹಿತಿ ಇರುವುದಿಲ್ಲ. ಅಲ್ಲದೆ, ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಇರುವುದಿಲ್ಲ. ಆದುದರಿಂದಾಗಿ ನಾವು ತರಬೇತಿ ನೀಡಿ ಜಾಗೃತಗೊಳಿಸುತ್ತೇವೆ ಎಂದರು.

ಧೂಮಪಾನ ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಕೃಷಿಕರಿಗೆ ಮನದಟ್ಟು ಮಾಡಿಕೊಡಬೇಕಾದ ತುರ್ತು ಅಗತ್ಯವಾದುದು. ಹೀಗಾಗಿ, ಹಲವು ಜಾಗೃತಿ ಕಾರ್ಯಕ್ರಮಗಳನ್ನ ಸಂಘಟಿಸುತ್ತೇವೆ. ಈ ಸಂಬಂಧ ಕೃಷಿ ವಿವಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ನುಡಿದರು.

ತಂಬಾಕು ಸೇವನೆಯಿಂದ ದೇಶದಲ್ಲಿ ಪ್ರತಿದಿನ 2500 ಜನ ಸಾವನ್ನಪ್ಪುತ್ತಿದ್ದಾರೆ. ವಿಶ್ವದ 10 ರಲ್ಲಿ 1 ಸಾವು ತಂಬಾಕಿನಿಂದ ಉಂಟಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದ ಅವರು, ರಾಜ್ಯದಲ್ಲಿಯೂ ತಂಬಾಕು ಉತ್ಪನ್ನಗಳ ಸೇವನೆಯಿಂದ ವರ್ಷಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಮರಣದ ಕದ ತಟ್ಟುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯನ್ನು ನಿಷೇಧ ಮಾಡಬೇಕು. ಈ ಸಂಬಂಧದ ಕಾಯ್ದೆಗೆ ತಿದ್ಧುಪಡಿ ತಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ವಿಧಿಸುತ್ತಿರುವ ದಂಡ ಶುಲ್ಕವನ್ನು ಹೆಚ್ಚಿಸಬೇಕು ಎಂದ ಅವರು, ಸಾರ್ವಜನಿಕರು ಮದ್ಯಪಾನ ಹಾಗೂ ಧೂಮಪಾನದಿಂದ ದೂರವಿರಿ ಎಂದು ಸಲಹೆ ನೀಡಿದರು.

ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಹೇರುವುದರಿಂದ ಸಾಕಷ್ಟು ಜನರ ಆರೋಗ್ಯ ಸುಧಾರಣೆ ತರಬಹುದಾಗಿದೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ಅಪಾಯಕಾರಿ ಪದಾರ್ಥವೇ ಚಟ ಹತ್ತಿಕೊಳ್ಳಲು ಕಾರಣವಾಗುತ್ತದೆ. ನಾವು ತಂಬಾಕನ್ನು ಸುಟ್ಟಾಗ (ಸಿಗರೇಟ್ ಇಲ್ಲವೇ ಬೀಡಿ ಸೇದುವ ಮೂಲಕ), ನಾವು ನಮಗರಿವಿಲ್ಲದಂತೆ ಆ ಹೊಗೆಯಲ್ಲಿ ನಿಕೋಟಿನ್ ಹಾಗೂ ಇನ್ನಿತರ 4000 ವಿಷಕಾರಿ ಪದಾರ್ಥಗಳು ನಮ್ಮ ಶ್ವಾಸನಾಳದ ಒಳ ಸೇರುತ್ತವೆ. ಸಿಗರೇಟಿನ ಹೊಗೆಯಲ್ಲಿ ಕ್ಯಾನ್ಸರ್ ಉಂಟು ಮಾಡುವಂತಹ ಅಪಾಯಕಾರಿ ಅಂಶಗಳು ಇವೆ ಎಂದು ಹೇಳಿದರು.

ಐಎಎಸ್ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ತಂಬಾಕಿನಲ್ಲಿ ಕಣ್ಣಿಗೆ ಕಾಣದ ಸಾವಿರಕ್ಕೂ ಅಧಿಕ ರಾಸಾಯನಿಕ ವಸ್ತುಗಳು ಇರುತ್ತದೆ. ಇದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಮ್ಮ ದೇಹದಲ್ಲಿರುವ ಪ್ರತಿ ಅಂಗಾಂಗ ನಾಶ ಮಾಡುವ ಕೆಲಸ ನಿಕೋಟಿನ್ ಮಾಡುತ್ತದೆ ಎಂದು ಎಚ್ಚರಿಸಿದರು.

ಕರ್ನಾಟಕದಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತಂಬಾಕು ಉತ್ಪನ್ನ ಬೆಳೆಯುತ್ತಾರೆ. ಮೈಸೂರು, ಹಾಸನ, ಮಡಿಕೇರಿಯಲ್ಲಿ ಅಧಿಕ ತಂಬಾಕು ಬೆಳೆಗಾರರಿದ್ದು, ಇವರನ್ನು ಪರ್ಯಾಯ ಬೆಳೆಗಳನ್ನು ಬೆಳೆಯುವುದರ ಕಡೆಗೆ ರಾಜ್ಯ ಸರಕಾರ ಹಾಗೂ ಕೃಷಿ ಇಲಾಖೆ ಹಲವು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಾರಂಪರಿಕ ಬೆಳೆಯಿಂದ ವೈಜ್ಞಾನಿಕ ಬೆಳೆಯತ್ತ ರೈತರನ್ನು ಮಾರ್ಪಾಡು ಮಾಡಲಾಗುತ್ತಿದೆ. ಶಿವಮೊಗ್ಗವನ್ನು ತಂಬಾಕು ರಹಿತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಹಾಸನ, ಮಡಿಕೇರಿ, ಮೈಸೂರು ಜಿಲ್ಲೆಗಳಲ್ಲಿ ಈ ಕುರಿತು ಕಾಳಜಿ ವಹಿಸಲಾಗುತ್ತದೆ ಎಂದು ನುಡಿದರು. ಸಮಾರಂಭದಲ್ಲಿ ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ, ಐಎಫ್‌ಎಸ್ ಅಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News