ಪೋಲಂಡ್‌ನ 11ರ ಬಾಲೆ ಪ್ರಧಾನಿ ಮೋದಿಗೆ ಪತ್ರ ಬರೆದದ್ದು ಏಕೆ ಗೊತ್ತೇ ?

Update: 2019-06-03 05:29 GMT

ಪಣಜಿ: ಗೋವಾದಲ್ಲಿ ಶಿಕ್ಷಣ ಪಡೆಯುತ್ತಿದ್ದ ಪೋಲಂಡ್ ಮೂಲದ 11 ವರ್ಷದ ಬಾಲಕಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಪತ್ರ ಬರೆದು ತನಗೆ ಹಾಗೂ ತಾಯಿಗೆ ಭಾರತಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಕೋರಿದ್ದಾಳೆ.

ಭಾರತವನ್ನು ಈ ಬಾಲಕಿ ಮನೆ ಎಂದು ಹೇಳಿಕೊಂಡಿದ್ದಾಳೆ. ಕಳೆದ ಏಪ್ರಿಲ್‌ನಲ್ಲಿ ಆಕೆಯ ತಾಯಿ ಮರ್ತುಷ್ಕಾ ಕೋಟ್ಲಾಸ್ಕಾ, ಅಂದಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ತನ್ನ ಮಗಳ ಜತೆ ಭಾರತಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಕೋರಿದ್ದರು. ಇದಕ್ಕೂ ಮುನ್ನ ಆಕೆಯನ್ನು ವೀಸಾ ಅವಧಿ ಮೀರಿ ಭಾರತದಲ್ಲಿ ನೆಲೆ ನಿಂತ ಆರೋಪದಲ್ಲಿ ಕಪ್ಪುಪಟ್ಟಿಗೆ ಸೇರಿಸಿ, ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಬಳಿಕ ಮಾನವೀಯತೆಯ ಆಧಾರದಲ್ಲಿ ಕೆಲ ದಿನಗಳ ಮಟ್ಟಿಗೆ ಮರು ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಆಗ ಪುತ್ರಿಯನ್ನು ಕರೆದೊಯ್ದಿದ್ದರು.

11 ವರ್ಷದ ಅಲಿಕ್ಜಾ ವನಟ್ಕೊ ಇದೀಗ ತನ್ನ ಕೈಬರಹದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕಪ್ಪುಪಟ್ಟಿಯಿಂದ ತನ್ನ ಹಾಗೂ ತಾಯಿಯ ಹೆಸರನ್ನು ಕಿತ್ತುಹಾಕಿ, ತನ್ನ ಶಾಲಾ ದಿನವನ್ನು ಗೋವಾದಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದ್ದಾಳೆ. ತನ್ನ ಸ್ನೇಹಿತೆಯರು, ಪ್ರಾಣಿಗಳು, ಶಾಲೆ ಹಾಗೂ ಸಂತೋಷ ಈ ದೇಶದಲ್ಲಿ ಅಡಗಿದೆ ಎಂದು ಆಕೆ ಬಣ್ಣಿಸಿದ್ದಾಳೆ.

"ಗೋವಾದ ನನ್ನ ಶಾಲೆಯನ್ನು ಮತ್ತು ಸುಂದರ ಪರಿಸರವನ್ನು ಅತೀವವಾಗಿ ಪ್ರೀತಿಸುತ್ತೇನೆ. ಪ್ರಾಣಿಗಳ ರಕ್ಷಣಾ ಕೇಂದ್ರದಲ್ಲಿ ಗೋವುಗಳ ಆರೈಕೆಗೆ ನೆರವಾಗುವ ಮೂಲಕ ನಾನು ಮಾಡುತ್ತಿದ್ದ ಸೇವಾ ದಿನಗಳನ್ನು ನಾನು ಕಳೆದುಕೊಂಡಿದ್ದೇನೆ. ನನ್ನ ತಾಯಿಗೆ ಮೇ 24ರಂದು ಭಾರತಕ್ಕೆ ಮರು ಪ್ರವೇಶ ಪಡೆಯಲು ಅವಕಾಶ ನಿರಾಕರಿಸಲಾಗಿತ್ತು. ನಮ್ಮನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಅದು ನಮ್ಮ ತಪ್ಪಿನಿಂದ ಆದದ್ದಲ್ಲ. ಅದು ನ್ಯಾಯಸಮ್ಮತವಲ್ಲ" ಎಂದು ಹೇಳಿದ್ದಾಳೆ.

ತಾಯಿ ಹಾಗೂ ಮಗು ಸದ್ಯಕ್ಕೆ ಕಾಂಬೋಡಿಯಾದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News