ಮೇಕೆದಾಟು-ಮಹಾದಾಯಿ ಯೋಜಗೆ ಅನುಮೋದನೆ ಕೊಡಿಸಿ: ಸದಾನಂದ ಗೌಡಗೆ ಡಿಕೆಶಿ ಮನವಿ

Update: 2019-06-03 16:42 GMT

ಬೆಂಗಳೂರು, ಜೂ.3: ರಾಜ್ಯದ ಮೇಕೆದಾಟು ಹಾಗೂ ಮಹಾದಾಯಿ ನೀರಾವರಿ ಯೋಜನೆ ವಿಚಾರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವ ವಹಿಸಿಕೊಂಡು ಅನುಮೋದನೆ ಕೊಡಿಸಲಿ. ಅವರಿಗೆ ಅಗತ್ಯವಿರುವ ಎಲ್ಲ ಸರಕಾರ ನೀಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಡಿಪಿಆರ್ ಸಲ್ಲಿಸಿಲ್ಲ ಎಂದು ಸದಾನಂದಗೌಡ ನೀಡಿದ ಹೇಳಿಕೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಜ.18ರಂದು 9 ಸಾವಿರ ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿ(ಡಿಪಿಆರ್)ಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿದ್ದೇವೆ. ಈ ಡಿಪಿಆರ್ ಪ್ರತಿಯನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ಜ.25ರಂದು ಕಳುಹಿಸಿ ಪರಿಶೀಲಿಸುವಂತೆ ಕೇಂದ್ರ ಜಲ ಆಯೋಗ ಕೇಳಿಕೊಂಡಿತ್ತು. ಅದರಂತೆ 20 ಪ್ರತಿಗಳನ್ನು ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ನಮ್ಮ ರಾಜ್ಯಕ್ಕಿಂತ ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಉಭಯ ರಾಜ್ಯಗಳಿಗೆ ಪ್ರಯೋಜನವಾಗಲಿರುವ ಈ ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಅವಕಾಶ ನಮಗೆ ಸಿಕ್ಕಿತ್ತು ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರವು ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸುವಂತೆ ನಮ್ಮ ರಾಜ್ಯಕ್ಕೆ ಅನುಮತಿ ನೀಡಿದಾಗ ತಮಿಳುನಾಡಿನ ಸಂಸದರು ಪ್ರತಿಭಟನೆ ನಡೆಸಿದ್ದರು. ಆಗ ಸದಾನಂದಗೌಡರ ನಿವಾಸದಲ್ಲೆ ಸಭೆ ನಡೆಸಿ ನಮ್ಮ ಸಂಸದರು ‘ನಮ್ಮ ನೀರು, ನಮ್ಮ ಹಕ್ಕು’ ಎಂದು ಪ್ರತಿಭಟನೆ ನಡೆಸಿದರು. ಇಷ್ಟೆಲ್ಲ ಗೊತ್ತಿದ್ದರೂ ನಾವು ಡಿಪಿಆರ್ ಸಲ್ಲಿಸಿಲ್ಲವೆಂದು ಅವರು ನೀಡಿರುವ ಹೇಳಿಕೆ ಅರ್ಥವಾಗುತ್ತಿಲ್ಲ ಎಂದು ಶಿವಕುಮಾರ್ ಹೇಳಿದರು.

ನೀರಿನ ವಿಚಾರದಲ್ಲಿ ನನಗೆ ರಾಜಕೀಯ ಮಾಡಲು ಇಷ್ಟವಿಲ್ಲ. ರಾಜ್ಯದ ಹಿತಕ್ಕಾಗಿ ಎಲ್ಲರೂ ಪಕ್ಷ ಬೇಧ ಮರೆತು ಹೋರಾಟ ಮಾಡಿದ್ದಾರೆ. ನಮ್ಮ ಸರಕಾರದ ಬಳಿ ಇರುವಂತಹ ಎಲ್ಲ ದಾಖಲೆಗಳನ್ನು ಅವರಿಗೆ ನೀಡುತ್ತೇನೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರುವ ಸದಾನಂದಗೌಡರು, ನೇತೃತ್ವ ವಹಿಸಿಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿ ಎಂದು ಅವರು ಕೋರಿದರು.

ಶೀಘ್ರದಲ್ಲೆ ಸದಾನಂದಗೌಡರನ್ನು ಭೇಟಿ ಮಾಡಿ ಈ ಯೋಜನೆಯ ಕುರಿತು ಮನವರಿಕೆ ಮಾಡಿಕೊಡುತ್ತೇನೆ. ಅಲ್ಲದೇ, ಸರ್ವ ಪಕ್ಷಗಳ ಸಭೆ ಕರೆದು ಈ ಯೋಜನೆ ಕುರಿತು ತೀರ್ಮಾನ ಕೈಗೊಳ್ಳುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ ಎಂದು ಶಿವಕುಮಾರ್ ಹೇಳಿದರು.

ತಮಿಳುನಾಡು ಸರಕಾರ ಈ ಯೋಜನೆಗೆ ತಡೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದೆ. ಆದರೆ, ಇದರಿಂದ ಯೋಜನೆಗೆ ಚಾಲನೆ ನೀಡಲು ಯಾವುದೇ ಅಡ್ಡಿ ಆಗುವುದಿಲ್ಲ ಎಂದ ಅವರು, ಇದೇ ವೇಳೆ ತಮಿಳುನಾಡಿಗೆ 9.2 ಟಿಎಂಸಿ ನೀರು ಬಿಡುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀಡಿರುವ ಸೂಚನೆಗೆ ಗೌರವ ನೀಡುವುದಾಗಿ ತಿಳಿಸಿದರು.

ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಈ ಹಂತದಲ್ಲಿ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ ? ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಳವಾದರೆ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ ಈ ಬಾರಿ ನಿರೀಕ್ಷೆಗೆ ತಕ್ಕಂತೆ ಮಳೆಯಾಗುವ ಮುನ್ಸೂಚನೆಗಳು ಕಾಣುತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ನಾಲ್ಕು ಜಲಾಶಯಗಳಲ್ಲಿ ಸದ್ಯ ಕೇವಲ 13.13 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಮಳೆಯಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಜೂ.6ರಂದು ಚಿಕ್ಕಮಗಳೂರಿನ ಕಿಗ್ಗಾಕ್ಕೆ ತೆರಳುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News