ಮಂತ್ರಕ್ಕೆ ಮಳೆ ಹನಿ ಉದುರುವುದಿಲ್ಲ

Update: 2019-06-04 05:25 GMT

ವಿಜ್ಞಾನ, ತಂತ್ರಜ್ಞಾನದಲ್ಲಿ ಅದೆಷ್ಟು ಸಾಧನೆಗಳನ್ನು ಮಾಡಿದರೂ, ಮನುಷ್ಯ ಪ್ರಕೃತಿಯ ಮುಂದೆ ಸದಾ ಅಸಹಾಯಕ. ವಿಜ್ಞಾನ ಪ್ರಕೃತಿಯನ್ನು ಶೋಧಿಸಿದೆಯೇ ಹೊರತು, ಯಾವುದನ್ನೂ ಸೃಷ್ಟಿಸಿಲ್ಲ. ವಿಜ್ಞಾನದ ಶೋಧನೆ, ಪ್ರಕೃತಿಯ ಅಗಾಧತೆಯನ್ನು, ವಿಸ್ಮಯವನ್ನು ಪ್ರಕಟಪಡಿಸುತ್ತಾ ಮನುಷ್ಯನ ಮಿತಿಯನ್ನು ಪದೇ ಪದೇ ಎತ್ತಿ ಹಿಡಿಯುತ್ತಿದೆ. ತಾನೆಲ್ಲವನ್ನು ಸಾಧಿಸಿದ್ದೇನೆ ಎಂದು ಬೊಗಳೆ ಬಿಡುವ ಮನುಷ್ಯ, ಮಳೆಗಾಲದ ಹೊತ್ತಿನಲ್ಲಿ ಮಳೆ ಬೀಳದೆ ಇದ್ದರೆ ಒಮ್ಮೆಲೇ ಕಂಗಾಲಾಗುತ್ತಾನೆ. ಮನುಷ್ಯ ಮೋಡಗಳಿಂದ ಮಳೆ ಸುರಿಸುವಂತೆ ಮಾಡಬಹುದು, ಆದರೆ ಆತ ಮೋಡಗಳನ್ನಾಗಲಿ, ಮಳೆಯನ್ನಾಗಲಿ ಸೃಷ್ಟಿಸಲಾರ.

ಪ್ರಕೃತಿಯ ಮೇಲೇ ಮನುಷ್ಯ ನಡೆಸುತ್ತಾ ಬಂದಿರುವ ಹಸ್ತಕ್ಷೇಪಗಳು ಹೇಗೆ ಆತನಿಗೆ ತಿರುಗುಬಾಣವಾಗುತ್ತಿದೆ ಎನ್ನುವುದಕ್ಕೆ ಹವಾಮಾನ ಬದಲಾವಣೆಗಳು, ಅದರ ದುಷ್ಪರಿಣಾಮಗಳೇ ಅತ್ಯುತ್ತಮ ಉದಾಹರಣೆ. ಭೂಮಿ ದಿನದಿಂದ ದಿನಕ್ಕೆ ಬಿಸಿಯಾಗುತ್ತಿದೆ. ಮಳೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎನ್ನುವುದನ್ನು ಅಧ್ಯಯನಗಳು ಹೇಳುತ್ತಿವೆ. ಮನುಷ್ಯನ ಕ್ರಿಯೆಗಳಿಗೆ ಈ ವೈಪರೀತ್ಯಗಳು ಪ್ರತಿಕ್ರಿಯೆಗಳಾಗಿವೆ. ಇಂದು ಮನುಷ್ಯ ಪ್ರಕೃತಿಯ ಜೊತೆಗೆ ಸಂಧಾನಕ್ಕಿಳಿಯುವುದೇ ಆತನ ಉಳಿವಿಗೆ ಇರುವ ಏಕೈಕ ಮಾರ್ಗವಾಗಿದೆ. ಅಂದರೆ ತನ್ನ ತಪ್ಪುಗಳನ್ನು ಒಪ್ಪಿಕೊಂಡು, ಪ್ರಕೃತಿಯ ಮೇಲಿನ ಹಸ್ತಕ್ಷೇಪಗಳನ್ನು ಇಳಿಮುಖಗೊಳಿಸಿ, ಅಳಿದುಳಿದುದನ್ನು ಸರಿಪಡಿಸುತ್ತಾ ಮುಂದೆ ಹೋಗಬೇಕಾಗಿದೆ.

  ಈ ಹಿಂದೆ ಮಳೆಗಾಲವೆಂದರೆ ಸದಾ ಜಿರಿ ಜಿರಿ ಮಳೆ, ತುಂಬಿ ಹರಿವ ನದಿ, ಪಾಚಿಗಟ್ಟಿದ ಅಂಗಳ, ರಾತ್ರಿಯ ಜೀರುಂಡೆ ಸದ್ದು...ಮಳೆಗಾಲದ ಆ ಸೌಂದರ್ಯ ಇಂದು ಇಲ್ಲವಾಗಿದೆ. ಜೂ. 1ಕ್ಕೆ ಶುರುವಾಗಬೇಕಾದ ಮಳೆಗಾಗಿ ನಾವಿಂದು ಜುಲೈವರೆಗೂ ಆಕಾಶ ನೋಡುತ್ತಾ ಕಾಯುವ ಸ್ಥಿತಿಯಿದೆ. ಸಾಧಾರಣವಾಗಿ ಮುಂಗಾರು ಮಳೆಗೆ ಮುನ್ನವೇ ಮೇ ತಿಂಗಳಲ್ಲಿ ಹಲವು ಬಾರಿ ಮಳೆ ಸುರಿದು, ನದಿ, ಬಾವಿಗಳು ತುಂಬುವುದಿದೆ. ಆದರೆ ಈ ಬಾರಿ ಮೇ ತಿಂಗಳು ಬೇಸಿಗೆಯ ಧಗೆಯಿಂದ ತತ್ತರಿಸಿದೆ. ಜನರು ಅಸಹಾಯಕರಾಗಿದ್ದಾರೆ.

ವಿವಿಧ ನಗರಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಗಳು ಸುಟ್ಟುಹೋಗುತ್ತಿವೆ. ಇಂತಹ ಹೊತ್ತಿನಲ್ಲಿ ಮನುಷ್ಯರಿಗೆ ಏಕೈಕ ಭರವಸೆಯೆಂದರೆ ದೇವರು. ಈ ಬಾರಿಯೂ ವಿವಿಧ ಧರ್ಮೀಯರು ಮಳೆಗಾಗಿ ಪೂಜೆ, ನಮಾಝ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ವಿವಿಧ ಧರ್ಮೀಯರು ತಮ್ಮ ತಮ್ಮ ನಂಬಿಕೆಗಳಿಗೆ ಅನುಸಾರವಾಗಿ ಮಳೆಗಾಗಿ ಪ್ರಾರ್ಥಿಸುವುದು ಸಹಜವೂ, ಮಾನವೀಯವೂ ಆಗಿದೆ. ಸಾರ್ವಜನಿಕವಾಗಿ ಈಗಾಗಲೇ ಹಲವು ಕಾರ್ಯಕ್ರಮಗಳು ನಡೆದಿವೆ. ವಿವಿಧ ದೇವಸ್ಥಾನಗಳು, ಮಸೀದಿಗಳು, ಚರ್ಚ್‌ಗಳಲ್ಲೂ ಈ ಪ್ರಾರ್ಥನೆ ಮುಂದುವರಿಯುತ್ತಲೇ ಇವೆ.

ವಿಪರ್ಯಾಸವೆಂದರೆ, ಇದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಕಂದಾಯ ಇಲಾಖೆಯು ಜೂ. 6ರಂದು ಎಲ್ಲ ದೇವಾಲಯಗಳಲ್ಲಿ ಪರ್ಜನ್ಯ ಜಪ, ಅಭಿಷೇಕ, ಹೋಮ ಹಾಗೂ ವಿಶೇಷ ಪೂಜೆ ನಡೆಸಬೇಕು ಎಂದು ಅಧಿಕೃತವಾಗಿ ಆದೇಶ ನೀಡಿದೆ. ಅತ್ಯಂತ ತಮಾಷೆಯ ವಿಷಯವೆಂದರೆ, ಜೂ.6ರಂದು ಮುಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿಕೆ ನೀಡಿದೆ. ನಿಜಕ್ಕೂ ಮೇ ತಿಂಗಳಲ್ಲಿ ಒಂದಿಷ್ಟು ಮಳೆ ಸುರಿದಿದ್ದರೆ ನಾಡಿಗೆ ಒಂದಿಷ್ಟು ಒಳ್ಳೆಯದಾಗುತ್ತಿತ್ತು. ಇಷ್ಟಕ್ಕೂ ಯಾವುದೇ ಧರ್ಮದ ಪೂಜೆ ಪುನಸ್ಕಾರಗಳ ಮೂಲಕ ಮಳೆ ಬರಿಸುವುದು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯವಲ್ಲ. ಪೂಜೆ ಅವರವರ ನಂಬಿಕೆಗೆ ಸಂಬಂಧ ಪಟ್ಟಿರುವುದು. ಕಂದಾಯ ಇಲಾಖೆ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕಾಗಿ ಮಳೆಯ ವಿಷಯವನ್ನು ದೇವರ ತಲೆಯ ಮೇಲೆ ಹಾಕಿ ಬಚಾವಾಗಲು ಹೊರಟಿದೆ.

ಪೂಜೆ ಪುನಸ್ಕಾರದ ಮೂಲಕ ನಾಡನ್ನು ಅಭಿವೃದ್ಧಿಗೊಳಿಸುವುದಕ್ಕೆ ಸರಕಾರದ ಅಗತ್ಯವಿಲ್ಲ. ನಾಡಿನಲ್ಲಿ ಮಳೆಯ ಕೊರತೆಗೆ, ನೀರಿನ ಒರತೆಯ ಇಳಿತಕ್ಕೆ ನಿಜವಾದ ಕಾರಣಗಳೇನು ಎನ್ನುವುದನ್ನು ಗುರುತಿಸಿ ಅದಕ್ಕೆ ಯೋಜನೆಗಳನ್ನು ರೂಪಿಸುವುದು ಕಂದಾಯ ಇಲಾಖೆಯ ಅಥವಾ ಸರಕಾರದ ಕರ್ತವ್ಯವಾಗಿದೆ. ಈ ನಾಡಿನಲ್ಲಿ ಭೂಗತವಾಗಿರುವ ಸಾವಿರಾರು ಕೆರೆಗಳಿವೆ. ಅವುಗಳನ್ನು ಪುನಶ್ಚೇತನಗೊಳಿಸಿದರೆ ಮತ್ತೆ ನಮ್ಮ ನೆಲ ಹಸಿರಾಗಬಹುದಾಗಿದೆ. ಕಂಡ ಕಂಡಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ಅಂತರ್ಜಲವನ್ನು ಹೀರಿ ತೆಗೆಯಲಾಗುತ್ತಿದೆ. ಹೀಗಿರುವಾಗ ನಮ್ಮ ಕೆರೆ, ಬಾವಿಗಳಲ್ಲಿ ನೀರಿನ ಒರತೆಯಿರುವುದಾದರೂ ಹೇಗೆ ಸಾಧ್ಯ? ಮಿತಿಗಿಂತ ಆಳವಾದ ಬೋರ್‌ವೆಲ್‌ಗಳು ಇಂದು ಭೂತಾಯಿಯ ಗರ್ಭವನ್ನು ಹಿಂಡಿ ಹಾಕುತ್ತಿವೆೆ. ಇವುಗಳಿಗೆ ಕಡಿವಾಣ ಹಾಕುವುದಕ್ಕೆ ಸೂಕ್ತ ಆದೇಶಗಳನ್ನು ಹೊರಡಿಸುವುದು ಸರಕಾರದ ಕೆಲಸ.

ಜೊತೆಗೆ ಇಂಗುಗುಂಡಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವುದು, ಮಳೆ ನೀರು ಸಂಗ್ರಹಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವುದು, ಪ್ರತಿ ಊರಿನಲ್ಲಿರುವ ಕೆರೆಗಳನ್ನು ಗುರುತಿಸಿ ಅದರ ಹೂಳೆತ್ತುವ ಕಾರ್ಯಗಳಲ್ಲಿ ಕೈ ಜೋಡಿಸುವುದು, ಇರುವ ಬಾವಿಗಳನ್ನು ಸಾಯಲು ಬಿಡದೆ ಅವುಗಳನ್ನು ಅಭಿವೃದ್ಧಿಗೊಳಿಸುವುದು ಸರಕಾರದ ಕರ್ತವ್ಯ. ಇಷ್ಟು ಮಾಡಿದರೆ, ನಿಧಾನಕ್ಕೆ ನಮ್ಮ ನೆಲ ಹಸಿರಾಗುತ್ತಾ ಹೋಗುತ್ತದೆ. ಹಾಗೆಯೇ ಇರುವ ಮರ, ಕಾಡುಗಳನ್ನು ಉಳಿಸುತ್ತಾ ಇನ್ನಷ್ಟು ಮರಗಳನ್ನು ಬೆಳೆಸುವ ಕಡೆಗೆ ಸರಕಾರ ಮನ ಮಾಡಬೇಕು. ಪೂಜೆ, ಪರ್ಜನ್ಯ ಜಪ ಇತ್ಯಾದಿಗಳನ್ನು ಆಯಾ ಧರ್ಮದ ಜನರಿಗೆ ಬಿಟ್ಟು, ತನ್ನ ಕೆಲಸದ ಕಡೆಗೆ ಗಮನ ಹರಿಸಿದರೆ, ಈ ನೆಲದಲ್ಲಿ ಮಳೆ ಬೆಳೆಯಾಗುವ ಸಾಧ್ಯತೆಗಳಿವೆ.

ಇದೇ ಸಂದರ್ಭದಲ್ಲಿ ಮೋಡ ಬಿತ್ತನೆಯ ಕುರಿತಂತೆಯೂ ಸರಕಾರ ಮಾತನಾಡುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಮೋಡಬಿತ್ತನೆ ಅನಿವಾರ್ಯ ಎಂಬರ್ಥದ ಮಾತುಗಳನ್ನು ಸರಕಾರ ಆಡುತ್ತಿದೆ. ಮೋಡ ಬಿತ್ತನೆ ಎನ್ನುವುದು ಖಾಸಗಿ ಸಂಸ್ಥೆಗಳು ಹಣ ಮಾಡುವುದಕ್ಕಿರುವ ಹೊಸ ತಂತ್ರ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈವರೆಗೆ ಮೋಡ ಬಿತ್ತನೆ ತನ್ನ ಉದ್ದೇಶವನ್ನು ಪರಿಣಾಮವಾಗಿ ಸಾಧಿಸಿಲ್ಲ ಮತ್ತು ಮೋಡ ಬಿತ್ತನೆಗಳು ಪ್ರಕೃತಿಯ ಲಯವನ್ನು ಅಸ್ತವ್ಯಸ್ತಗೊಳಿಸುತ್ತದೆ ಎನ್ನಲಾಗುತ್ತಿದೆ.

ಈ ಮೋಡ ಬಿತ್ತನೆಯ ಹೆಸರಿನಲ್ಲಿ ರಾಜಕಾರಣಿಗಳು ಮತ್ತು ಖಾಸಗಿ ಸಂಸ್ಥೆಗಳು ಹಣ ದೋಚಿರುವುದನ್ನು ಬಿಟ್ಟರೆ ರೈತರಿಗೆ ಆದ ಲಾಭ ಅಷ್ಟಕ್ಕಷ್ಟೇ. ಸಹಜವಾಗಿ ಬೀಳುವ ಮಳೆಯನ್ನು ‘ಸಿಸೇರಿಯನ್ ಮೂಲಕ’ ಸುರಿಯುವಂತೆ ಮಾಡುವ ಈ ಮೋಡ ಬಿತ್ತನೆ, ಪ್ರಕೃತಿಯ ಜೊತೆಗೆ ನಡೆಸುವ ಇನ್ನೊಂದು ಚೆಲ್ಲಾಟವಾಗಿದೆ. ಅದು ಮಳೆಗಾಲವನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಗಳೇ ಹೆಚ್ಚು. ನಮ್ಮ ಹಿಂದಿನ ಕಾಲದ ಮಳೆಗಾಲವನ್ನು ಮತ್ತೆ ನಮ್ಮದಾಗಿಸಲು ಇರುವ ಒಂದೇ ದಾರಿ ಪ್ರಕೃತಿಯ ಜೊತೆಗೆ ನಾವು ನಡೆಸುತ್ತಿರುವ ಅತಿರೇಕಗಳನ್ನು ನಿಲ್ಲಿಸಿ, ಅದರೊಂದಿಗೆ ಸೌಹಾರ್ದವಾಗಿ ಬದುಕುವುದಾಗಿದೆ. ಪ್ರಕೃತಿಗೆ ದ್ರೋಹ ಬಗೆದು, ದೇವರಲ್ಲಿ ಮಳೆ ಸುರಿಸಲು ಬೇಡಿಕೊಂಡರೆ, ಅದನ್ನು ದೇವರು ಈಡೇರಿಸುವುದಾದರೂ ಹೇಗೆ ಸಾಧ್ಯ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News