ಎಸ್ಸಿ-ಎಸ್ಟಿ ಕಾರ್ಯಕ್ರಮಗಳಲ್ಲಿ ನಾವೀನ್ಯತೆ ತರಲು ಮುಖ್ಯಮಂತ್ರಿ ಸೂಚನೆ

Update: 2019-06-04 18:20 GMT

ಬೆಂಗಳೂರು, ಜೂ.4: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳಲ್ಲಿ ನಾವೀನ್ಯತೆ ತರಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2019-20ನೆ ಸಾಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಉಪಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಉಪಯೋಜನೆಗಳ ಜಾರಿಯಲ್ಲಿ ಹೊಸತನದ ಕೊರತೆಯಿದೆ. ಹಿಂದಿನ ವರ್ಷಗಳ ಯೋಜನೆಗಳೆ ಪುನರಾವರ್ತನೆಯಾಗುತ್ತಿದೆ. ಹೊಸ ಸಾಧ್ಯತೆಗಳ ಕುರಿತು ಚಿಂತಿಸಿ. ಅಲ್ಲದೇ, ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಉಪಯೋಜನೆಯಡಿ ರೂಪಿಸಿರುವ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಿರುವ ಬಗ್ಗೆ ಮೌಲ್ಯಮಾಪನ ಮಾಡಲು ಅವರು ಸೂಚಿಸಿದರು.

ಎಸ್ಟಿಪಿ ಟಿಎಸ್ಪಿ ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಭೆಗೆ ಬರುವಾಗ ಕಳೆದ ವರ್ಷದ ಮಾಹಿತಿಯನ್ನು ಹಾಗೂ ಫಲಾನುಭವಿಗಳ ಅಂಕಿ ಅಂಶಗಳೊಂದಿಗೆ ಬರಬೇಕು. ಯೋಜನೆಗಳ ಪ್ರಯೋಜನವನ್ನು ಪಡೆದ ಫಲಾನುಭವಿಗಳೇ ಮತ್ತೆ ಮತ್ತೆ ಈ ಯೋಜನೆಯಿಂದ ಲಾಭ ಪಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಫಲಾನುಭವಿಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹಿಂದಿನ ಸರಕಾರ ಅನುಸೂಚಿತ ಜಾತಿ-ಪಂಗಡಗಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿದೆ. ಕಳೆದ ವರ್ಷಗಳಲ್ಲಿ 1 ಲಕ್ಷ 40 ಸಾವಿರ ಕೋಟಿ ರೂ.ಗಳನ್ನು ಅನುಸೂಚಿತ ಜಾತಿಗಳು/ಅನುಸೂಚಿತ ಪಂಗಡಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಈ ಸಮುದಾಯದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಲು ಶಾಶ್ವತ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಯೋಚಿಸಬೇಕು. ಅವರನ್ನು ಮೇಲೆತ್ತಲು ಬದಲಾವಣೆಗಳನ್ನು ತರಬೇಕಿದೆ. ನಿಗದಿತ ಗುರಿ ಮುಟ್ಟುವಲ್ಲಿ ಇರುವ ಲೋಪಗಳನ್ನು ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು. ಇಲಾಖಾವಾರು ಕಾರ್ಯಕ್ರಮಗಳನ್ನು ರೂಪಿಸುವ ಬದಲು ಆದ್ಯತೆ ಮೇರೆಗೆ ಶಿಕ್ಷಣ, ವಸತಿ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆಯಬೇಕೆಂದು ಕುಮಾರಸ್ವಾಮಿ ಹೇಳಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News