ಹಿಂದಿಯ ವೇಷದಲ್ಲಿ ಮತ್ತೊಮ್ಮೆ ವಾಮನ

Update: 2019-06-05 07:27 GMT

ಕೇಂದ್ರದ ‘ಹಿಂದಿ ಹೇರಿಕೆ’ ಮತ್ತೆ ಸುದ್ದಿಯಲ್ಲಿದೆ. ಹಿಂದಿಯೇತರ ರಾಜ್ಯಗಳ ಶಾಲೆಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ರಾಷ್ಟ್ರೀಯ ಶಿಕ್ಷಣ ಕರಡು ನೀತಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೇಂದ್ರ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ. ಕೇಂದ್ರದ ನಿಲುವಿನ ವಿರುದ್ಧ ತಮಿಳುನಾಡು ದೊಡ್ಡ ಧ್ವನಿಯಲ್ಲಿ ಮಾತನಾಡಿತು. ದಕ್ಷಿಣ ಭಾರತದ ಮೇಲೆ ಹಿಂದಿಹೇರಿಕೆಯ ಹುನ್ನಾರ ನಡೆದಾಗಲೆಲ್ಲ, ತಮಿಳುನಾಡು ಬೆಟ್ಟದಂತೆ ನಿಂತು ಅದನ್ನು ಎದುರಿಸಿದೆ. ಬಹುಶಃ ತಮಿಳುನಾಡನ್ನು ನಾವು ದ್ರಾವಿಡ ಭಾಷೆಗಳ ದಿಡ್ಡಿ ಬಾಗಿಲು ಎಂದೇ ಕರೆಯಬಹುದು. ಒಂದೆಡೆ ಇಂಗ್ಲಿಷನ್ನು ಹೇಗೆ ನಿಭಾಯಿಸುವುದು ಎಂದು ತಿಳಿಯದೆ ಪ್ರಾದೇಶಿಕ ಭಾಷೆಗಳು ಗೊಂದಲದಲ್ಲಿರುವಾಗ, ಗಾಯದ ಮೇಲೆ ಬರೆ ಎಳೆಯಲು ಕೇಂದ್ರ ಸರಕಾರ ಮುಂದಾಗಿದೆ. ಇದೀಗ ಐಚ್ಛಿಕ ಎಂದು ತನ್ನ ನಿಲುವಿನಿಂದ ಹಿಂದೆ ಸರಿದಿದೆಯಾದರೂ, ನಿಜಕ್ಕೂ ಕರ್ನಾಟಕದಂತಹ ರಾಜ್ಯದಲ್ಲಿ ಹಿಂದಿಯನ್ನು ನಾವು ‘ಆಯ್ಕೆ’ಯಾಗಿ ಮಾತ್ರ ಸ್ವೀಕರಿಸುವ ಸ್ಥಿತಿಯಲ್ಲಿದ್ದೇವೆಯೋ ಎನ್ನುವುದನ್ನು ಅವಲೋಕಿಸುವ ಸಮಯ ಬಂದಿದೆ.

  ಹೆಚ್ಚು ಭಾಷೆಗಳನ್ನು ಕಲಿತಂತೆ ನಮ್ಮ ಜಗತ್ತು ಹೆಚ್ಚು ಹೆಚ್ಚು ವಿಸ್ತಾರವಾಗುತ್ತಾ ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದಿ ಕಲಿಯುವುದರಿಂದ ಉತ್ತರ ಭಾರತೀಯರ ಜೊತೆಗಿನ ನಮ್ಮ ಸಂವಹನ ಇನ್ನಷ್ಟು ಸುಲಭವಾಗಬಹುದು. ಹಿಂದಿ ಸಿನೆಮಾ, ನಾಟಕಗಳ ಮೂಲಕ ಈಗಾಗಲೇ ಹಿಂದಿ ಭಾಷೆ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಯಾವ ಹೇರಿಕೆಯೂ ಇಲ್ಲದೆ ಹಲವರು ಹಿಂದಿ ಭಾಷೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಿಂದಿ ಭಾಷೆಯನ್ನು ಕಲಿತ ಕಾರಣದಿಂದಲೇ ಬೇರೆ ಬೇರೆ ಅವಕಾಶಗಳನ್ನು ಬಾಚಿಕೊಂಡಿದ್ದಾರೆ. ಹಿಂದಿಯನ್ನು ಐಚ್ಛಿಕವಾಗಿ ದಕ್ಷಿಣ ಭಾರತೀಯರು ಈ ಹಿಂದೆಯೇ ಸ್ವೀಕರಿಸಿದ್ದಾರೆ. ಅದಕ್ಕೆ ಸರಕಾರದ ಫರ್ಮಾನಿನ ಅಗತ್ಯವೇ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರ ಹಿಂದಿಯ ಮೂಲಕ ಉತ್ತರ ಭಾರತದ ‘ಮೇಲರಿಮೆ’ಯನ್ನು ದಕ್ಷಿಣ ಭಾರತೀಯರ ಮೇಲೆ ಹೇರಲು ಯತ್ನಿಸುತ್ತಿರುವುದನ್ನು ಒಕ್ಕೊರಲಲ್ಲಿ ಪ್ರತಿಭಟಿಸಬೇಕಾಗುತ್ತದೆ. ‘ಹಿಂದುತ್ವ’ದ ಶಕ್ತಿಗಳು ಪರೋಕ್ಷವಾಗಿ ಈ ಹಿಂದಿ ಹೇರಿಕೆಯ ಬೆನ್ನಿಗಿದೆ. ಒಂದು ದೇಶ, ಒಂದು ಭಾಷೆ ಎನ್ನುವ ಸರ್ವಾಧಿಕಾರಿ ನಿಲುವು ಇದರ ಹಿಂದಿದೆ. ಇಲ್ಲಿ ಭಾಷೆ ಒಂದು ನೆಪ ಮಾತ್ರವಾಗಿದೆ. ಈ ಭಾಷೆಯ ಮರೆಯಲ್ಲಿ ಹಿಂದಿ ಭಾಷಿಗರ ಸಂಸ್ಕೃತಿಯನ್ನೂ ದಕ್ಷಿಣ ಭಾರತೀಯರ ಮೇಲೆ ಹೇರುವ ಪ್ರಯತ್ನ ನಡೆಯುತ್ತಿದೆ. ಹಿಂದಿ ಭಾಷೆಯನ್ನು ಭಾರತದ ರಾಷ್ಟ್ರಭಾಷೆಯಾಗಿಸುವ ಪ್ರಯತ್ನದ ಮೊದಲ ಹೆಜ್ಜೆಯಾಗಿ, ಪಠ್ಯಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಸರಕಾರ ಮುಂದಾಗಿದೆ.

ಇಷ್ಟಕ್ಕೂ ಪಠ್ಯದಿಂದ ಹಿಂದಿಯನ್ನು ಹಿಂದೆಗೆದಾಕ್ಷಣ, ದಕ್ಷಿಣ ಭಾರತೀಯ ಭಾಷೆಗಳು ಬಚಾವಾದವು ಎಂದು ಭಾವಿಸಬೇಕಾಗಿಲ್ಲ. ಈಗಾಗಲೇ ಹಿಂದಿ ಬೇರೆ ಬೇರೆ ವೇಷಗಳಲ್ಲಿ ನಮ್ಮ ನಡುವೆ ಬೇರೂರಿದೆ. ದಕ್ಷಿಣ ಭಾರತದ ಬಹುತೇಕ ಬ್ಯಾಂಕ್‌ಗಳು ಹಿಂದಿ ಭಾಷೆ ಅನಿವಾರ್ಯ ಎಂಬಂತೆ ಅದಕ್ಕೆ ಪ್ರೋತ್ಸಾಹ ನೀಡುತ್ತಿವೆ. ಮುಖ್ಯವಾಗಿ ಬ್ಯಾಂಕ್‌ಗಳು ಮತ್ತು ರೈಲ್ವೇ ಇಲಾಖೆಗಳ ಸಿಬ್ಬಂದಿಯಲ್ಲಿ ಉತ್ತರ ಭಾರತೀಯರೇ ತುಂಬಿ ಹೋಗಿದ್ದಾರೆ. ರೈಲ್ವೇ ಇಲಾಖೆ ಮತ್ತು ಬ್ಯಾಂಕ್‌ಗಳಲ್ಲಿ ವ್ಯವಹರಿಸಬೇಕಾದರೆ ಹಿಂದಿ ತಿಳಿದಿರಲೇ ಬೇಕು ಎನ್ನುವಂತಹ ಸ್ಥಿತಿಯನ್ನು ಈಗಾಗಲೇ ನಿರ್ಮಾಣ ಮಾಡಲಾಗಿದೆ. ದಕ್ಷಿಣ ಭಾರತೀಯ ಭಾಷೆಗಳನ್ನು ತುಚ್ಛವಾಗಿ ನೋಡುವ ಮನಸ್ಥಿತಿ ಉತ್ತರ ಭಾರತೀಯರಲ್ಲಿ ಹೆಚ್ಚಾಗುತ್ತಿದೆ. ಬಹುಶಃ ಈ ದೇಶದ ರಾಜಕೀಯ ಚುಕ್ಕಾಣಿ ಸಂಪೂರ್ಣ ಉತ್ತರ ಭಾರತೀಯರ ಕೈಯಲ್ಲಿರುವುದೇ ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಹಿಂದಿಯ ಮೂಲಕ ದಕ್ಷಿಣ ಭಾರತೀಯರು ಹೆಚ್ಚು ಹೆಚ್ಚು ಅವಕಾಶಗಳನ್ನು ತನ್ನದಾಗಿಸಿಕೊಳ್ಳಬಹುದು, ಅಭಿವೃದ್ಧಿಗೆ ಪೂರಕವಾಗಬಹುದು ಎನ್ನುವುದು ಕೇಂದ್ರ ಸರಕಾರದ ತರ್ಕವಾಗಿದೆ. ಆದರೆ ಒಂದನ್ನು ಗಮನಿಸಬೇಕು. ಇಂದಿಗೂ ಪ್ರಾದೇಶಿಕ ಭಾಷೆಗಳನ್ನು ನೆಚ್ಚಿಕೊಂಡಿರುವ ದಕ್ಷಿಣ ಭಾರತೀಯರೇ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಶಿಕ್ಷಣ, ಆರೋಗ್ಯವೂ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉತ್ತರ ಭಾರತೀಯರು ಅಚ್ಚರಿ ಪಡುವಂತೆ ದಕ್ಷಿಣ ಭಾರತೀಯರು ಅಭಿವೃದ್ಧಿಹೊಂದಿದ್ದಾರೆ. ಉತ್ತರ ಭಾರತ, ಬಿಹಾರ, ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಶೈಕ್ಷಣಿಕ ಮಟ್ಟ ದಕ್ಷಿಣ ಭಾರತಕ್ಕೆ ಹೋಲಿಸಿದರೆ ತೀರಾ ಕೆಳಮಟ್ಟದಲ್ಲಿದೆ. ಅಪರಾಧ ಪ್ರಕರಣಗಳಲ್ಲಿ ಉತ್ತರ ಭಾರತದ ರಾಜ್ಯಗಳೇ ಮೇಲ್‌ಸ್ತರದಲ್ಲಿವೆ. ಪ್ರಾದೇಶಿಕ ಭಾಷೆಗಳನ್ನು ನೆಚ್ಚಿಕೊಂಡ ಕಾರಣಕ್ಕಾಗಿ ಕೇರಳ, ತಮಿಳುನಾಡು, ಕರ್ನಾಟಕದಂತಹ ರಾಜ್ಯಗಳು ಹಿಂದುಳಿದಿದ್ದರೆ ಕೇಂದ್ರದ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಬಹುದಿತ್ತೇನೋ. ಸದ್ಯಕ್ಕೆ ದಕ್ಷಿಣ ಭಾರತ, ಹಿಂದಿಗಿಂತ ಜಾಗತಿಕ ಭಾಷೆಯಾದ ಇಂಗ್ಲಿಷ್‌ಗೆ ಮಹತ್ವವನ್ನು ನೀಡುತ್ತಿದೆ. ಇಲ್ಲಿನ ಅಭಿವೃದ್ಧಿಗೆ ಇಂಗ್ಲಿಷ್ ಕೂಡ ಒಂದು ಕಾರಣ ಎನ್ನಬಹುದು. ಬ್ಯಾಂಕ್‌ಗಳು, ಸಹಕಾರಿ ಸಂಘಗಳು, ಐಟಿ, ಬಿಟಿಯಂತಹ ಸಂಸ್ಥೆಗಳ ಮೂಲಕ ದಕ್ಷಿಣ ಭಾರತ ಜಾಗತಿಕವಾಗಿ ಗಮನ ಸೆಳೆಯುತ್ತಿರುವಾಗ, ಹಿಂದಿಯನ್ನು ಹೇರಿ ಈ ರಾಜ್ಯಗಳನ್ನು ಉದ್ಧರಿಸಲು ಹೊರಟಿರುವ ಕೇಂದ್ರದ ಕ್ರಮ ಹಾಸ್ಯಾಸ್ಪದವೇ ಸರಿ. ಕೆಲವು ವರ್ಷಗಳ ಹಿಂದೆ ಅಮಿತ್ ಶಾ ಕೇರಳಿಗರ ಮೇಲೆ ಉತ್ತರ ಭಾರತವನ್ನು ಹೇರಲು ಹೋಗಿ ತೀವ್ರ ಮುಖಭಂಗ ಅನುಭವಿಸಿದ್ದರು. ಕೇರಳ ಓಣಂ ಹಬ್ಬವನ್ನು ನಾಡಹಬ್ಬದಂತೆ ಆಚರಿಸುತ್ತದೆ. ಜಾತಿ, ಧರ್ಮ, ಭೇದಗಳಿಲ್ಲದೆ ಜನರು ಈ ಹಬ್ಬಕ್ಕೆ ಒಂದಾಗುತ್ತಾರೆ. ‘ಓಣಂ’ ಹಬ್ಬ ಬಲಿಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ. ಓಣಂ ಸಂದರ್ಭದಲ್ಲಿ ಬಲಿ ಚಕ್ರವರ್ತಿ ತನ್ನ ನಾಡಿನ ಜನರನ್ನು ವೀಕ್ಷಿಸಲು ಭೂಮಿಗಿಳಿಯುತ್ತಾನೆ ಎನ್ನುವುದು ಕೇರಳಿಗರ ನಂಬಿಕೆ. ವಾಮನನಿಂದ ಮೋಸದಿಂದ ತುಳಿಯಲ್ಪಟ್ಟು ನಾಡಿನಿಂದ ಗಡಿಪಾರಾದ ಬಲಿಚಕ್ರವರ್ತಿಗೆ ವರ್ಷಕ್ಕೊಮ್ಮೆ ತನ್ನ ನಾಡನ್ನು ವೀಕ್ಷಿಸಲು ಅವಕಾಶ ನೀಡಲಾಗುತ್ತದೆ. ಬಲಿ ಚಕ್ರವರ್ತಿ ನಾಡಿಗೆ ಆಗಮಿಸುವ ಆ ಸಂದರ್ಭವನ್ನು ಕೇರಳಿಗರು ಹಬ್ಬದ ಮೂಲಕ ಸಂಭ್ರಮಿಸುತ್ತಾರೆ. ಆದರೆ ಮೂರು ವರ್ಷಗಳ ಹಿಂದೆ ಓಣಂ ಸಂದರ್ಭದಲ್ಲಿ ಅಮಿತ್ ಶಾ ಕೇರಳಿಗರ ಓಣಂ ಹಬ್ಬವನ್ನು ‘ವಾಮನ ಜಯಂತಿ’ಯಾಗಿ ಪರಿವರ್ತಿಸಿದರು. ಮಾತ್ರವಲ್ಲ, ಕೇರಳಿಗರಿಗೆ ‘ವಾಮನ ಜಯಂತಿ’ ಶುಭಾಶಯಗಳನ್ನು ಜಾಹೀರಾತುಗಳ ಮೂಲಕ ಕೋರಿಸಿದರು. ಆದರೆ ಇದನ್ನು ಕೇರಳಿಗರು ಒಕ್ಕೊರಲಲ್ಲಿ ಪ್ರತಿಭಟಿಸಿದರು. ಅಮಿತ್ ಶಾ ವಿರುದ್ಧ ಸಾಮಾಜಿಕ ತಾಣಗಳಲ್ಲಿ ದೊಡ್ಡ ಆಂದೋಲನವೇ ನಡೆಯಿತು. ಬಳಿಕ ಅಮಿತ್ ಶಾ ತಮ್ಮ ಶುಭಾಶಯವನ್ನು ಹಿಂದೆಗೆದುಕೊಂಡರು. ಹಿಂದಿ ಎನ್ನುವುದು ಕೇಂದ್ರಕ್ಕೆ ಒಂದು ನೆಪ ಮಾತ್ರ. ಹಿಂದಿಯ ವೇಷದಲ್ಲಿ ಮತ್ತೆ ವಾಮನ ದಕ್ಷಿಣ ಭಾರತೀಯರ ನೆತ್ತಿಯ ಮೇಲೆ ಕಾಲಿಡಲು ಪ್ರಯತ್ನಿಸುತ್ತಿದ್ದಾನೆ. ಈ ಹಿಂದಿಯ ವೇಷದಲ್ಲಿ ಬಂದ ವಾಮನನನ್ನು ಪ್ರತಿಭಟಿಸದೇ ಇದ್ದರೆ ಮುಂದೊಂದು ದಿನ ಈ ನೆಲದ ಅಸ್ಮಿತೆಯ ನೆತ್ತಿಯ ಮೇಲೆ ಹಿಂದಿ ಭಾಷಿಕರು ತಮ್ಮ ಪಾದವನ್ನು ಊರಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News