ಮಾಲೆಗಾಂವ್ ಸ್ಫೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೆ ಆಸ್ಪತ್ರೆಗೆ ದಾಖಲಾದ ಪ್ರಜ್ಞಾ ಸಿಂಗ್

Update: 2019-06-06 08:20 GMT

ಭೋಪಾಲ್, ಜೂ.6 : ಬಿಜೆಪಿಯ ಭೋಪಾಲ ಸಂಸದೆ ಹಾಗೂ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ತಾನು ಅತಿಯಾದ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿಕೊಂಡಿದ್ದರಿಂದ ಗುರುವಾರ ಮುಂಬೈ ವಿಶೇಷ ನ್ಯಾಯಾಲಯ ತನ್ನ ಮುಂದೆ ಹಾಜರಾಗುವುದರಿಂದ ಆಕೆಗೆ ಒಂದು ದಿನದ ವಿನಾಯಿತಿ ನೀಡಿದೆ.

 ಆದರೆ ಶುಕ್ರವಾರ ನಡೆಯುವ ವಿಚಾರಣೆಗೆ ಹಾಜರಾಗಬೇಕು ಇಲ್ಲವೇ ಪರಿಣಾಮ ಎದುರಿಸಬೇಕಾದೀತು ಎಂದು ನ್ಯಾಯಾಲಯ ಎಚ್ಚರಿಸಿದೆಯಲ್ಲದೆ, ಪ್ರಜ್ಞಾ ಆಸ್ಪತ್ರೆಗೆ ದಾಖಲಾಗಿರುವ ಕುರಿತಂತೆ ಅಗತ್ಯ ವೈದ್ಯಕೀಯ ದಾಖಲೆಗಳನ್ನು ಒದಗಿಸಿಲ್ಲ ಎಂದೂ ಹೇಳಿದೆ.

ಸಂಸತ್ತಿನಲ್ಲಿ ಕೆಲವೊಂದು ಪ್ರಕ್ರಿಯೆಗಳಲ್ಲಿ ಭಾಗಿಯಾಗಲಿರುವುದರಿಂದ ಈ ವಾರ ನಡೆಯುವ ವಿಚಾರಣೆಯ ವೇಳೆ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಪ್ರಜ್ಞಾ ಸಲ್ಲಿಸಿದ್ದ ಅಪೀಲನ್ನು ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶರು ಇತ್ತೀಚೆಗೆ ತಿರಸ್ಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಬುಧವಾರ ತಡ ರಾತ್ರಿ ಪ್ರಜ್ಞಾ ಠಾಕೂರ್ ಅವರನ್ನು ಹೊಟ್ಟೆಯ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಬುಧವಾರ ಬೆಳಗ್ಗೆ ಆಕೆಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

‘‘ಆಕೆಗೆ ಅಸೌಖ್ಯವಿದೆ. ಹೊಟ್ಟೆ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಕೆಗೆ ಚುಚ್ಚುಮದ್ದು ನೀಡಲಾಗಿದೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಆಕೆಗೆ ಅನಾರೋಗ್ಯವಿರುವುದರಿಂದ ಕಾರ್ಯಕ್ರಮ ಮುಗಿದ ಕೂಡಲೇ ಮತ್ತೆ ಆಸ್ಪತ್ರೆಗೆ ಮರಳುತ್ತಾರೆ’’ ಎಂದು ಪ್ರಜ್ಞಾ ಅವರ ಸಹಾಯಕಿ ಉಪ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News