ಜಾರಿ ನಿರ್ದೇಶನಾಲಯದೆದುರು ಹೇಳಿಕೆ: ಮತ್ತೊಂದು ದಿನ ನಿಗದಿಗೆ ಪಟೇಲ್ ಕೋರಿಕೆ

Update: 2019-06-06 14:22 GMT

 ಹೊಸದಿಲ್ಲಿ, ಜೂ.6: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದೆದುರು ಹೇಳಿಕೆ ನೀಡಲು ಮತ್ತೊಂದು ದಿನಾಂಕ ನಿಗದಿಗೊಳಿಸಬೇಕು ಎಂದು ಮಾಜಿ ಕೇಂದ್ರ ಸಚಿವ, ಎನ್‌ಸಿಪಿ ಮುಖಂಡ ಪ್ರಫುಲ್ ಪಟೇಲ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

   ಏರ್‌ಇಂಡಿಯಾ ಸಂಸ್ಥೆಗೆ ಕೋಟ್ಯಂತರ ರೂಪಾಯಿ ನಷ್ಟ ತಂದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಳಿಕೆ ನೀಡಲು ಮಾಜಿ ಸಚಿವ ಪಟೇಲ್‌ಗೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಪಟೇಲ್ ಈ ಪ್ರಕರಣದಲ್ಲಿ ಆರೋಪಿಯಲ್ಲ. ಆದರೆ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ದೀಪಕ್ ತಲ್ವಾರ್‌ನ ಪರಿಚಯ ಅವರಿಗಿತ್ತು ಎಂದು ಮೂಲಗಳು ತಿಳಿಸಿವೆ.

    ಪಟೇಲ್ 2004ರಿಂದ 2011ರ ಅವಧಿಯಲ್ಲಿ ನಾಗರಿಕ ವಿಮಾನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ನಾಗರಿಕ ವಿಮಾನಯಾನ ಸಚಿವಾಲಯದ ಸಂಕೀರ್ಣತೆಯನ್ನು ಅರಿತುಕೊಳ್ಳಲು ಜಾರಿ ನಿರ್ದೇಶನಾಲಯದೊಂದಿಗೆ ಸಹಕರಿಸಲು ತನಗೆ ಸಂತಸವಾಗುತ್ತದೆ ಎಂದು ಪಟೇಲ್ ಈ ಹಿಂದೆ ಹೇಳಿದ್ದರು. ಪೂರ್ವನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮತ್ತೊಂದು ದಿನ ನಿಗದಿಗೊಳಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ಪಟೇಲ್ ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪಟೇಲ್ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಳ್ಳಲಿದೆ. ಪಟೇಲ್ ರಾಜ್ಯಸಭಾ ಸಂಸದರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News