ಪಾಯಲ್ ತಡ್ವಿ ಸಾವು ಪ್ರಕರಣ: ಆರೋಪಿ ವೈದ್ಯರಿಗೆ ಭಾಗಶಃ ಕ್ರೈಬ್ರಾಂಚ್ ಕಸ್ಟಡಿ

Update: 2019-06-06 14:46 GMT

ಮುಂಬೈ, ಜೂ.6: ವೈದ್ಯಕೀಯ ವಿದ್ಯಾರ್ಥಿನಿ ಪಾಯಲ್ ತಡ್ವಿ ಆತ್ಮಹತ್ಯೆ ಮಾಡುವಂತೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಮೂವರು ವೈದ್ಯೆಯರನ್ನು ಸಂಪೂರ್ಣವಾಗಿ ಕ್ರೈಬ್ರಾಂಚ್ ಕಸ್ಟಡಿಗೆ ನೀಡಲು ನಿರಾಕರಿಸಿರುವ ಬಾಂಬೆ ಉಚ್ಚ ನ್ಯಾಯಾಲಯ ಆರೋಪಿಗಳಿಗೆ ಭಾಗಶಃ ಕ್ರೈಬ್ರಾಂಚ್ ಕಸ್ಟಡಿ ನೀಡಿದೆ.

 ಆರೋಪಿ ವೈದ್ಯೆಯರಾದ ಹೇಮಾ ಅಹುಜಾ, ಭಕ್ತಿ ಮೆಹೆರ್ ಮತ್ತು ಅಂಕಿತಾ ಖಂಡೇಲ್ವಾಲ್‌ಗೆ ನ್ಯಾಯಾಧೀಶ ಎಸ್.ಎಸ್ ಶಿಂಧೆ ಭಾಗಶಃ ಕಸ್ಟಡಿ ನೀಡಿದ್ದಾರೆ. ಆ ಪ್ರಕಾರ, ಕ್ರೈಬ್ರಾಂಚ್ ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ರವರೆಗೆ ಮತ್ತು ನಂತರ ಶುಕ್ರವಾರದಿಂದ ರವಿವಾರದವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆರೋಪಿಗಳ ವಿಚಾರಣೆ ನಡೆಸಬಹುದಾಗಿದೆ. ಆರೋಪಿಗಳನ್ನು ಕ್ರೈಬ್ರಾಂಚ್‌ನ ಕಚೇರಿಯಲ್ಲಿ ವಿಚಾರಣೆ ನಡೆಸಬಹುದಾಗಿದ್ದು ಸಂಜೆ 6 ಗಂಟೆಗೂ ಮೊದಲು ಜೈಲಿಗೆ ಮರಳಿ ಕಳುಹಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಮೇ 31ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ಮೇ 31ರಂದು ವಿಶೇಷ ನ್ಯಾಯಾಲಯ ಜೂನ್ 10ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆರೋಪಿಗಳನ್ನು ತನ್ನ ಸುಪರ್ದಿಗೆ ನೀಡುವಂತೆ ಮುಂಬೈ ಪೊಲೀಸ್ ಕ್ರೈಬ್ರಾಂಚ್ ಜೂನ್ 4ರಂದು ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಟಿ.ಎನ್ ಟೋಪಿವಾಲಾ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಪಾಯಲ್ ತಡ್ವಿ ಮೇ 22ರಂದು ಬಿವೈಎಲ್ ನಾಯರ್ ಆಸ್ಪತ್ರೆಯ ವಸತಿನಿಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News