ಸಂಚಾರ ದಟ್ಟಣೆಯಿಂದ ವಾಯುಮಾಲಿನ್ಯ: ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಕಳವಳ

Update: 2019-06-06 16:13 GMT

ಬೆಂಗಳೂರು, ಜೂ. 6: ಬೆಂಗಳೂರು ನಗರದಲ್ಲಿ ಪ್ರತಿನಿತ್ಯ 85ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರ ಹಾಗೂ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿಲ್ಪಾಫೌಂಡೇಷನ್‌ನಿಂದ ವಿಕ್ಟೋರಿಯಾ ಲೇಔಟ್‌ನ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಇಂದು ಮರ-ಗಿಡಗಳನ್ನು ನಾಶ ಪಡಿಸುತ್ತಿರುವ ಜೊತೆಗೆ ಕೆರೆ-ಕುಂಟೆಗಳು ಕಣ್ಮರೆಯಾಗುತ್ತಿರುವುದು ಬೇಸದರ ಸಂಗತಿ ಎಂದರು.

ನಗರದಲ್ಲಿ ಕಾಂಕ್ರಿಟೀಕರಣದಿಂದ ಉಷ್ಣಾಂಶ ಹೆಚ್ಚಾಗುತ್ತಿದೆ. ಹಸಿರು ಪರಿಸರ ಉಳಿಸಿಕೊಳ್ಳುವ ಹೊಣೆಗಾರಿಕೆ ವರ್ತಮಾನದಲ್ಲಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಿಲ್ಪಾ ಫೌಂಡೇಷನ್ ಪರಿಸರ ಜಾಗೃತಿ ಹಾಗೂ ಪರಿಸರ ಸ್ನೇಹಿ ಕಾರ್ಯಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾನು ಸರಕಾರಿ ಶಾಲೆಯಲ್ಲಿ ಕಲಿತವನು, ಆದುದರಿಂದ ವಿಶ್ವ ಪರಿಸರ ದಿನದಂದು ಸರಕಾರಿ ಶಾಲೆಯ ಆವರಣದಲ್ಲಿ ಗಿಡ ನೆಡುತ್ತಿರುವುದು ನನಗೆ ಹೆಮ್ಮೆಯ ಸಂಗತಿ ಎಂದ ಸುನೀಲ್ ಕುಮಾರ್, ಪರಿಸರದ ಬಗ್ಗೆ ಎಲ್ಲರೂ ಕಳಕಳಿ ಹೊಂದಬೇಕು. ಜತೆಗೆ ಪರಿಸರ ಸಂರಕ್ಷಣಗೆ ಆದ್ಯತೆ ನೀಡಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ಶಾಲಾ ಮಕ್ಕಳಿಗೆ ಶಿಲ್ಪಾ ಫೌಂಡೇಷನ್ ಪರವಾಗಿ ಸಮವಸ್ತ್ರಗಳನ್ನು ವಿತರಿಸಿದರು ಹಾಗೂ ಫಿಡಿಲಿಟಸ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಮೂಡಿಸುವ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬೆಸ್ಕಾಂ ಎಸ್ಪಿ ನಾರಾಯಣ, ಫೌಂಡೇಶನ್ ಟ್ರಸ್ಟಿ ಅಚ್ಯುತ್‌ಗೌಡ, ಪತ್ರಕರ್ತ ಡಾ.ಅರುಣ್ ಹೊಸಕೊಪ್ಪ, ಡಾ. ಕೆ.ಎಚ್.ಮರಿಯಪ್ಪ, ಟಿ.ಬಿ.ರಾಜಶೇಖರ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News