ತೆರಿಗೆ ಹೆಚ್ಚಳಕ್ಕೆ ಬಿಬಿಎಂಪಿ ತಯಾರಿ!

Update: 2019-06-06 16:25 GMT

ಬೆಂಗಳೂರು, ಜೂ.6: ಬಿಬಿಎಂಪಿಯು ಕೆಎಂಸಿ ಕಾಯ್ದೆಯಲ್ಲಿರುವಂತೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದು, 2020-21ನೆ ಸಾಲಿನಿಂದ ಹೆಚ್ಚುವರಿ ತೆರಿಗೆ ವಸೂಲಿಗೆ ಅನುಮತಿ ಕೋರಿ ಕೌನ್ಸಿಲ್‌ನಲ್ಲಿ ವಿಷಯ ಮಂಡಿಸಲು ತಯಾರಿ ನಡೆಸಲಾಗುತ್ತಿದೆ.

ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಪ್ರತಿ 3 ವರ್ಷಕ್ಕೊಮ್ಮೆ ಸ್ಥಳೀಯ ನಗರಾಡಳಿತ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಬೇಕಿದೆ. ನಿಯಮದಂತೆ 2019-20ನೇ ಸಾಲಿನಲ್ಲಿ ತೆರಿಗೆ ಹೆಚ್ಚಳ ಮಾಡಬೇಕಿತ್ತು. ಆದರೆ, ಲೊಕಸಭೆ ಚುನಾವಣೆಯಿದ್ದ ಕಾರಣದಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ 2020-21ನೆ ಸಾಲಿನಿಂದ ತೆರಿಗೆ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.

ಜೂನ್‌ನಲ್ಲಿ ನಡೆಯಲಿರುವ ಮಾಸಿಕ ಸಭೆಯಲ್ಲಿ ವಿಷಯ ಮಂಡಿಸಲು ಆಡಳಿತ ಪಕ್ಷ ಮುಂದಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜತೆ ಚರ್ಚೆ ಮಾಡಲು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮುಂದಾಗಿದ್ದಾರೆ.
ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿಯಾಗಿ ಪರಿವರ್ತನೆಗೊಂಡ ನಂತರದಿಂದ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಅಂದರೆ 2008ರಂದು ತೆರಿಗೆ ಹೆಚ್ಚಳ ಮಾಡಲಾಗಿತ್ತು. ಅದಾದ ನಂತರ 2010ರಲ್ಲಿ ಬಿಬಿಎಂಪಿ ಚುನಾವಣೆ ನಡೆದಿತ್ತು. ಅದಾದ 3 ವರ್ಷಗಳ ನಂತರ ತೆರಿಗೆ ಹೆಚ್ಚಿಸಬೇಕಿತ್ತು. ಆದರೆ, ವಿಧಾನಸಭೆ, ಲೊಕಸಭೆ ಹಾಗೂ ಬಿಬಿಎಂಪಿ ಚುನಾವಣೆಗಳು ಎದುರಾದ ಹಿನ್ನೆಲೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಮುಂದಾಗಿರಲಿಲ್ಲ.

ಶೇ. 20ರಿಂದ 25 ಹೆಚ್ಚಳ?: ಕೆಎಂಸಿ ಕಾಯ್ದೆ ಪ್ರಕಾರ ಬಿಬಿಎಂಪಿ ಆಯುಕ್ತರು ವಸತಿ ಕಟ್ಟಡಗಳಿಗೆ ಶೇ.20 ಮತ್ತು ವಾಣಿಜ್ಯ ಆಸ್ತಿಗಳಿಗೆ ಶೇ.25 ತೆರಿಗೆ ಹೆಚ್ಚಳದ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆಯನ್ನು ನಡೆಸಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ಅದಕ್ಕೆ ಬಹುತೇಕ ಒಪ್ಪಿಗೆಯನ್ನು ನೀಡಿದ್ದಾರೆ.

ಚುನಾವಣಾ ವರ್ಷ: ಈ ಬಾರಿಯ ಬಿಬಿಎಂಪಿ ಚುನಾವಣೆಯು ಮುಂದಿನ ವರ್ಷದ ಆಗಸ್ಟ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಚುನಾವಣೆಯ ಹಿಂದಿನ ವರ್ಷ ತೆರಿಗೆ ಹೆಚ್ಚಳ ಮಾಡಿದರೆ ಆಸ್ತಿ ಮಾಲಕರ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ ಎಂಬ ಆತಂಕ ಆಡಳಿತ ಪಕ್ಷಗಳಲ್ಲಿದೆ. ಅದರ ನಡುವೆಯೂ ತೆರಿಗೆ ಹೆಚ್ಚಳ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ನಗರಾಭಿವೃದ್ಧಿ ಇಲಾಖೆಯಿಂದ ಅನುಮೋದನೆ ಪಡೆಯುವುದಕ್ಕೂ ಮುನ್ನ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ವಿಷಯ ಮಂಡಿಸಿ ಒಪ್ಪಿಗೆ ಪಡೆಯಬೇಕಿದೆ. ಅದಕ್ಕೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದು, ಜೂನ್ ಮಾಸಿಕ ಸಭೆಯಲ್ಲಿ ವಿಷಯ ಮಂಡಿಸಲಾಗುತ್ತಿದೆ. ಎಲ್ಲ ಸದಸ್ಯರು ಅದಕ್ಕೆ ಒಪ್ಪಿಗೆ ನೀಡಿದ ನಂತರ ನಗರಾಭಿವೃದ್ಧಿ ಇಲಾಖೆಗೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.

ಪ್ರತಿ ಮೂರು ವರ್ಷಕ್ಕೆ ಒಂದು ಬಾರಿ ತೆರಿಗೆ ಹೆಚ್ಚಳ ಮಾಡಲು ಕೆಎಂಸಿ ಕಾಯ್ದೆಯಲ್ಲಿ ಅವಕಾಶವಿದೆ. ಅದರ ಪ್ರಕಾರ ನಾವು ಈ ತಿಂಗಳಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ವಿಷಯ ಮಂಡಿಸಿ, ಅನುಮೋದನೆ ಪಡೆದುಕೊಂಡು, ಸರಕಾರಕ್ಕೆ ಸಲ್ಲಿಸುತ್ತೇವೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್

ತೆರಿಗೆ ಪರಿಷ್ಕರಣೆಯಾಗಿ ಮೂರು ವರ್ಷಗಳು ಕಳೆದಿದ್ದು, 2019-20 ನೆ ಸಾಲಿನಲ್ಲಿ ತೆರಿಗೆ ಹೆಚ್ಚಳ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ, ಕೆಎಂಸಿ ಕಾಯ್ದೆ ಪ್ರಕಾರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸುವ ಉದ್ದೇಶವಿದೆ.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News