ಅನಾರೋಗ್ಯ ಎಂದು ಕೋರ್ಟ್ ಗೆ ಗೈರು ಹಾಜರಾದ ಪ್ರಜ್ಞಾ ಸಿಂಗ್ ಖಾಸಗಿ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ!

Update: 2019-06-06 18:21 GMT

ಭೋಪಾಲ,ಜೂ.6: ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು 2008ರ ಮಾಲೆಗಾಂವ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಅನಾರೋಗ್ಯ’ದ ಕಾರಣದಿಂದಾಗಿ ಮುಂಬೈನ ಎನ್‌ಐಎ ನ್ಯಾಯಾಲಯದಲ್ಲಿ ಗುರುವಾರ ಮತ್ತೆ ಗೈರುಹಾಜರಾಗಿದ್ದಾರೆ ಆದರೆ ಭೋಪಾಲದಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದು ಈ ವಾರದಲ್ಲಿ ಅವರ ಎರಡನೇ ಗೈರುಹಾಜರಿಯಾಗಿದೆ. ಶುಕ್ರವಾರವೂ ಹಾಜರಾಗದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಎಚ್ಚರಿಕೆ ನೀಡಿದೆ.

 ತನ್ನ ಕಕ್ಷಿದಾರರು ನಿರ್ಜಲೀಕರಣ,ಅಧಿಕ ರಕ್ತದೊತ್ತಡ ಮತ್ತು ಹೊಟ್ಟೆಯ ಸಮಸ್ಯೆಯಿಂದಾಗಿ ಮಂಗಳವಾರ ಸಂಜೆ ಭೋಪಾಲದ ಆಸ್ಪತ್ರೆಗೆ ದಾಖಲಾಗಿರುವುದಾಗಿ ಠಾಕೂರ್ ಪರ ವಕೀಲ ಪ್ರಶಾಂತ ಮಾಗೂ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಅವರ ಮನವಿಯನ್ನು ಪುರಸ್ಕರಿಸಿದ ವಿಶೇಷ ಎನ್‌ಐಎ ನ್ಯಾಯಾಧೀಶ ವಿ.ಎಸ್.ಪಡಲ್ಕರ್ ಅವರು ,ಠಾಕೂರ್ ಶುಕ್ರವಾರವೂ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಠಾಕೂರ್ ಆಸ್ಪತ್ರೆಗೆ ದಾಖಲಾಗಿರುವುದನ್ನು ಭೋಪಾಲ ಕೇರ್ ಹಾಸ್ಪಿಟಲ್‌ನ ನಿರ್ದೇಶಕ ಡಾ.ಅಜಯ ಮೆಹ್ತಾ ಅವರು ಸುದ್ದಿಸಂಸ್ಥೆಗೆ ದೃಢಪಡಿಸಿದರು. ಆದರೆ ಗುರುವಾರ ಸ್ನಾನ ಇತ್ಯಾದಿಗಳಿಗಾಗಿ ಮನೆಗೆ ತೆರಳಲು 7ರಿಂದ 8 ಗಂಟೆಗಳ ರಜೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದರು. ಗುರುವಾರ ಭೋಪಾಲದಲ್ಲಿ ಮಹಾರಾಣಾ ಪ್ರತಾಪ್ ಜಯಂತಿ ಅಂಗವಾಗಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ಠಾಕೂರ್ ಭಾಗಿಯಾಗಿದ್ದರು.

ಠಾಕೂರ್ ಅವರ ಆರೋಗ್ಯದ ಬಗ್ಗೆ ಮತ್ತು ನ್ಯಾಯಾಲಯದಲ್ಲಿ ಹಾಜರಾಗಲು ಮುಂಬೈಗೆ ಪ್ರಯಾಣಿಸಲು ಅವರಿಗೆ ಸಾಧ್ಯವೇ ಎಂಬ ಬಗ್ಗೆ ಹಿರಿಯ ವೈದ್ಯರೊಂದಿಗೆ ಸಮಾಲೋಚಿಸಿ ನಿರ್ಧರಿಸುವುದಾಗಿ ಡಾ.ಮೆಹ್ತಾ ತಿಳಿಸಿದರು.

ಜೂನ್ 3 ಮತ್ತು 7ರ ನಡುವೆ ಖುದ್ದಾಗಿ ಹಾಜರಾಗುವುದರಿಂದ ವಿನಾಯತಿ ನೀಡಬೇಕೆಂದು ಠಾಕೂರ್ ಈ ಹಿಂದೆ ಮಾಡಿಕೊಂಡಿದ್ದ ಮನವಿಗಳನ್ನು ನ್ಯಾಯಾಲಯವು ತಿರಸ್ಕರಿಸಿತ್ತಾದರೂ ಮಂಗಳವಾರ ಅವರು ಕಲಾಪಕ್ಕೆ ಗೈರು ಹಾಜರಾಗಿದ್ದರು. ವಾರಕ್ಕೆ ಕನಿಷ್ಠ ಒಂದು ಬಾರಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಆದೇಶವನ್ನು ಪಾಲಿಸಲು ಠಾಕೂರ್ ಶುಕ್ರವಾರ ಹಾಜರಾಗಲೇಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News