ಕೆಂಪೇಗೌಡ ಪ್ರಶಸ್ತಿಗೆ ಕಡಿವಾಣ ಹಾಕಿದ ಬಿಬಿಎಂಪಿ

Update: 2019-06-06 17:09 GMT

ಬೆಂಗಳೂರು, ಜೂ.6: ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಪ್ರತಿ ವರ್ಷ ನೀಡುವ ಪ್ರಶಸ್ತಿಯನ್ನು ಈ ಬಾರಿ 100ರ ಗಡಿ ಮೀರದಂತೆ ಕಡಿವಾಣ ಹಾಕಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.

ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿವಿಧ ಕ್ಷೇತ್ರದಲ್ಲಿನ ತಜ್ಞರೊಳಗೊಂಡ ಸಮಿತಿ ಆಯ್ಕೆ ಮಾಡಿದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಬೇಕೆಂದು ಚರ್ಚಿಸಲಾಗಿದೆ.
ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಾಲಿಕೆ ಆರಂಭವಾಗಿ 70 ವರ್ಷಗಳಾಗಿದ್ದು, 70 ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ನಗರದಲ್ಲಿ ಸಾಧಕರು ಹೆಚ್ಚಿರುವುದರಿಂದ 100ರೊಳಗೆ ಪ್ರಶಸ್ತಿ ನೀಡಲಾಗುವುದು. ಪ್ರತಿ ವರ್ಷದಂತೆ ಸಾಧಕರಿಗೆ ಪ್ರಶಸ್ತಿ ಲಕ, ನಗದು ಬಹುಮಾನ ನೀಡಲಾಗುವುದು. ಯಾರ ಒತ್ತಡಕ್ಕೂ ಒಳಗಾಗದೇ, ಅನಗತ್ಯವಾಗಿ ಪ್ರಶಸ್ತಿಯನ್ನು ಅನರ್ಹರಿಗೆ ನೀಡುವುದಿಲ್ಲ ಎಂದರು.

ಕೆಂಪೇಗೌಡ ಜಯಂತಿ ಜುಲೈ ತಿಂಗಳಾಂತ್ಯದಲ್ಲಿದ್ದು, ಪ್ರಶಸ್ತಿಯನ್ನು ಜಯಂತಿಯಂದೇ ನೀಡಲು ನಿರ್ಧರಿಸಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಿನಾಂಕ ನಿಗದಿ ಪಡಿಸಿಲ್ಲ. ಶೀಘ್ರ ದಿನಾಂಕ ನಿಗದಿಯಾಗಲಿದ್ದು, 100 ಜನರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಅಂತಿಮ ಆಯ್ಕೆ ಪಟ್ಟಿ ಜುಲೈ 2ನೇ ವಾರದಲ್ಲಿ ಪ್ರಕಟಿಸಲಾಗುವುದು. ಈ ಬಾರಿ ತಜ್ಞರನ್ನೊಳಗೊಂಡ ಸಮಿತಿ ಸೂಚಿಸಿದ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು ಎಂದು ಮೇಯರ್ ಹೇಳಿದ್ದಾರೆ.

ಪಾಲಿಕೆ ಇತಿಹಾಸದಲ್ಲಿಯೇ 500ಕ್ಕೂ ಅಧಿಕ ಜನರಿಗೆ ಪ್ರಶಸ್ತಿಗಳನ್ನು ನೀಡಿರಲಿಲ್ಲ. ಆದರೆ ಕಳೆದ ವರ್ಷ 500ಕ್ಕೂ ಅಧಿಕ ಪ್ರಶಸ್ತಿ ನೀಡುವ ಮೂಲಕ ಇಡೀ ರಾಜ್ಯಾದ್ಯಂತ ಪಾಲಿಕೆ ಕೆಟ್ಟ ಹೆಸರು ಪಡೆದಿತ್ತು. ಹಾಗೆಯೇ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಜನಪ್ರತಿನಿಧಿಗಳ ಒತ್ತಡಕ್ಕೂ ಮಣಿದಿದೆ ಎಂಬ ಅಪವಾದವೂ ಪಾಲಿಕೆಗೆ ಇತ್ತು. ಇದನ್ನು ಮನಗಂಡು ಈ ಬಾರಿ 100 ಪ್ರಶಸ್ತಿಗಳನ್ನು ಮಾತ್ರ ನೀಡಲು ತೀರ್ಮಾನಿಸಿದೆ.

ಅರ್ಜಿ ಆಹ್ವಾನ:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿಗೆ ಜೂ.20ರೊಳಗೆ ಅರ್ಜಿ ಸಲ್ಲಿಸಲು ಪಾಲಿಕೆ ತಿಳಿಸಿದೆ. ಅರ್ಜಿಗಳನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ಸಲ್ಲಿಸಬೇಕು.

ಕಳೆದ ವರ್ಷ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಶಸ್ತಿ ನೀಡಿದ್ದು, ವೇದಿಕೆ ಮೇಲಿನ ಅವ್ಯವಸ್ಥೆ ಕಂಡು ಅಂದಿನ ಮೇಯರ್ ಮತ್ತು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಮುಂದಿನ ವರ್ಷ 100ರೊಳಗೆ ಪ್ರಶಸ್ತಿ ನೀಡಬೇಕು ಎಂದು ತಾಕೀತು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News