ಉತ್ತರಪ್ರದೇಶ ಕಾರಾಗೃಹದ ಒಳಗಡೆ ಮದ್ಯ, ಜೂಜಾಟ: ಫೋಟೊದಿಂದ ಬಹಿರಂಗ

Update: 2019-06-06 17:37 GMT
ಫೋಟೊ ಕೃಪೆ: IANS

ಹೊಸದಿಲ್ಲಿ, ಜೂ. 6: ಬ್ಯಾರಕ್‌ಗಳ ಒಳಗೆ ಮದ್ಯಪಾನ ಹಾಗೂ ಜೂಜಾಟ ನಡೆಯುವ ಮೂಲಕ ಉತ್ತರಪ್ರದೇಶದ ಕಾರಾಗೃಹಗಳು ಪಾತಕಿಗಳಿಗೆ ಪಬ್ ಆಗಿ ಮಾರ್ಪಟ್ಟಿದೆ. ಮಾಂಸಹಾರ ಸವಿಯುವ ಹಾಗೂ ಮದ್ಯಪಾನ ಮಾಡುವ ಕೈದಿಗಳ ಹಲವು ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ಬಳಿಕ ಬಂಧಿಖಾನೆ ಇಲಾಖೆ ಮುಜುಗರಕ್ಕೊಳಗಾಗಿದೆ.

 ಇಲ್ಲಿನ ನೈನಿ ಕೇಂದ್ರ ಕಾರಾಗೃಹದಿಂದ ಗುಜರಾತ್‌ನ ಸಬರ್ಮತಿ ಕಾರಾಗೃಹಕ್ಕೆ ಮಾಫಿಯಾ ಡಾನ್ ಅತೀಕ್ ಅಹ್ಮದ್ ವರ್ಗಾವಣೆಯಾಗಲಿದ್ದ ಮುನ್ನಾ ದಿನ ಆಯೋಜಿಸಲಾಗಿದ್ದೆಂದು ಹೇಳಲಾದ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೊಗಳು ಇವುಗಳು. ಅತೀಕ್ ಅವರನ್ನು ಗುಜರಾತ್‌ಗೆ ವರ್ಗಾವಣೆ ಮಾಡಿ ಎಂದು ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶನ ನೀಡಿತ್ತು. ಅತೀಕ್ ಉದ್ಯಮಿಗಳನ್ನು ಅಪಹರಿಸಿ ಹಿಂಸೆ ನೀಡಿದ ಪ್ರಕರಣದ ಆರೋಪಿ.

ನೈನಿ ಕೇಂದ್ರ ಕಾರಾಗೃಹದಲ್ಲಿ ವರ್ಷಗಳಿಂದ ಇರುವ ಕೆಲವು ಪಾತಕಿಗಳು ಫೋಟೊ ಇದು ಎಂಬುದನ್ನು ಉತ್ತರಪ್ರದೇಶದ ಎಡಿಜಿ ಚಂದ್ರ ಪ್ರಕಾಶ್ ದೃಢಪಡಿಸಿದ್ದಾರೆ.

ಫೋಟೊದಲ್ಲಿ ಕಂಡು ಬರುವ ಮಾಂಸಹಾರ, ಮದ್ಯ ಹಾಗೂ ಸ್ಮಾರ್ಟ್‌ಫೋನ್ ಕಾರಾಗೃಹದ ಒಳಗೆ ಸಾಗಿಸುವಲ್ಲಿ ಸಿಬ್ಬಂದಿ ಶಾಮೀಲಾಗಿರುವ ಬಗ್ಗೆ ತನಿಖೆ ನಡೆಸುವಂತೆ ಕಾರಾಗೃಹದ ಡಿಐಜಿಗೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

 ಜೈಲಿನೊಳಗೆ ತೆಗೆದಿರುವುದು ಎಂದು ಹೇಳಲಾದ ಫೋಟೊದ ದಿನಾಂಕದ ಬಗ್ಗೆ ಪ್ರತಿಕ್ರಿಯಿಸಿದ ಎಡಿಜಿ, ‘‘ಈಗ ನಾವು ದಿನಾಂಕ ಮತ್ತು ಸಮಯ ಖಚಿತಪಡಿಸಲು ಸಾಧ್ಯವಿಲ್ಲ. ಇದು ಅತೀಕ್‌ನ ಬೀಳ್ಕೊಡುಗೆ ಪಾರ್ಟಿಯ ಫೋಟೊ ಎಂದು ನಾವು ಹೇಳಲು ಸಾಧ್ಯವಿಲ್ಲ. ಆದಾಗ್ಯೂ, ಅಂತಿಮ ವರದಿ ನೋಡಿದ ಬಳಿಕ, ಇದು ಭದ್ರತೆಯ ಗಂಭೀರ ಉಲ್ಲಂಘನೆ ಎಂದು ಹೇಳಲು ಸಾಧ್ಯ. ಜೈಲಿನ ಒಳಗಡೆ ಅಂತಹ ಪಾರ್ಟಿ ನಡೆದಿರುವುದು ದೃಢಪಟ್ಟ ಬಳಿಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News