ಗ್ರಾಮವಾಸ್ತವ್ಯ ರಾಜಕೀಯ ಪ್ರಹಸನವಾಗದಿರಲಿ

Update: 2019-06-07 05:32 GMT

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯವನ್ನು ಘೋಷಿಸಿದ್ದಾರೆ. ಈ ಬಾರಿ ಅವರು ಸರಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಆಶಾದಾಯಕ ವಿಷಯವಾಗಿದೆ. ಬಿಜೆಪಿ ಬೆಂಬಲಿತ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಆರಂಭಿಸಿದಾಗ ಆ ಕುರಿತಂತೆ ಸಾಕಷ್ಟು ಹೊಗಳಿಕೆ, ವಿಮರ್ಶೆ, ಟೀಕೆಗಳನ್ನು ಎದುರಿಸಿದ್ದರು. ಆದರೂ ಈ ಪರಿಕಲ್ಪನೆ ಕುಮಾರಸ್ವಾಮಿಯನ್ನು ತುಂಬಾ ಜನಪ್ರಿಯರನ್ನಾಗಿಸಿತ್ತು. ಮುಖ್ಯಮಂತ್ರಿಯೊಬ್ಬರು ಬೆಂಗಳೂರನ್ನು ತೊರೆದು ಜನರ ಬಳಿಗೇ ನೇರವಾಗಿ ತೆರಳಿ, ಅಲ್ಲಿ ವಾಸ್ತವ್ಯ ಹೂಡಿ ಅವರ ಸಮಸ್ಯೆಗಳನ್ನು ಆಲಿಸುವುದು ಆಗ ರಾಜ್ಯಕ್ಕೆ ಹೊಸತು. ಕುಮಾರಸ್ವಾಮಿಯವರ ಈ ಗ್ರಾಮ ವಾಸ್ತವ್ಯವನ್ನು ಬಳಿಕ ರಾಷ್ಟ್ರ ಮಟ್ಟದ ನಾಯಕರೂ ಅನುಕರಿಸತೊಡಗಿದರು. ಕೇಂದ್ರದ ಕಾಂಗ್ರೆಸ್, ಬಿಜೆಪಿ ಮುಖಂಡರು ಹಳ್ಳಿಗಳಿಗೆ ತೆರಳಿ ಅವರ ಜೊತೆ ವಾಸ್ತವ್ಯ ಹೂಡುವ ಪ್ರಹಸನಗಳನ್ನು ಶುರು ಹಚ್ಚಿದರು. ಗ್ರಾಮವಾಸ್ತವ್ಯ ಒಂದು ರಾಜಕೀಯ ಪ್ರಹಸನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅದು ಹಲವು ಬದಲಾವಣೆಗಳಿಗೆ ಕಾರಣವಾಗಬಹುದು. ಬೇರೆ ಬೇರೆ ರೀತಿಯ ಸಂದೇಶಗಳನ್ನು ಈ ಮೂಲಕ ಸರಕಾರ ನೀಡಬಹುದು. ಸದ್ಯಕ್ಕೆ ಮೈತ್ರಿ ಸರಕಾರ ಸರಕಾರಿ ಶಾಲೆಗಳ ಪುನಃಶ್ಚೇತನಕ್ಕೆ ಕೈ ಹಾಕಿದೆ.

ಅದರ ಭಾಗವಾಗಿ, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭ, ಎಲ್‌ಕೆಜಿ, ಯುಕೆಜಿಗಳನ್ನು ತೆರೆಯುವ ಯೋಜನೆಗಳನ್ನು ಈಗಾಗಲೇ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ನೇರವಾಗಿ ವಿವಿಧ ಶಾಲೆಗಳಲ್ಲಿ ಒಂದು ದಿನದ ವಾಸ್ತವ್ಯ ಮಾಡುವ ಮೂಲಕ, ಇಡೀ ಒಂದು ಗ್ರಾಮವನ್ನೇ ತನ್ನೆಡೆಗೆ ಸೆಳೆಯುವ ಅವಕಾಶವಿದೆ. ಸರಕಾರಿ ಶಾಲೆಗಳು ಮೂಲೆಗುಂಪಾಗಲು ಇಂಗ್ಲಿಷ್ ಮಾಧ್ಯಮದ ಓಲೈಕೆ ಮಾತ್ರ ಕಾರಣವಲ್ಲ. ಕಳಪೆ ಕಟ್ಟಡಗಳು, ಶಾಲಾಭಿವೃದ್ಧಿ ಸಮಿತಿಯ ನಿರ್ಲಕ್ಷ, ತರಗತಿಗಳಿಗೇ ಹಾಜರಾಗದ ಕಳಪೆ ಶಿಕ್ಷಕರು, ಸಂಪನ್ಮೂಲಗಳ ಕೊರತೆ ಇತ್ಯಾದಿ ಇತ್ಯಾದಿಗಳಿಂದಲೂ ಜನರು ಸರಕಾರಿ ಶಾಲೆಗಳಿಂದ ದೂರ ಸರಿಯುತ್ತಿದ್ದಾರೆ. ಮುಖ್ಯಮಂತ್ರಿ ನೇರವಾಗಿ ಸರಕಾರಿ ಶಾಲೆಗಳಿಗೆ ಭೇಟಿಯ ಯೋಜನೆ ಘೋಷಿಸಿದಾಕ್ಷಣ ಶಾಲೆಗಳಿಗೆ ಸಂಬಂಧಪಟ್ಟ ಸಿಬ್ಬಂದಿ, ಅಧಿಕಾರಿ ವರ್ಗ ಎಚ್ಚರಗೊಳ್ಳುತ್ತದೆ. ಅಷ್ಟೇ ಅಲ್ಲ, ಊರಿನ ಗಮನ ಸರಕಾರಿ ಶಾಲೆಯ ಕಡೆಗೆ ಹರಿಯುತ್ತದೆ. ಶಾಲೆಗಳ ಪ್ರತಿಷ್ಠೆಯೂ ಹೆಚ್ಚುತ್ತದೆ. ಮುಖ್ಯಮಂತ್ರಿ ಒಂದು ಊರಿಗೆ ಭೇಟಿ ನೀಡಿ ಭಾಷಣ ಹೊಡೆದು ಬರುವುದಕ್ಕೂ ಅಲ್ಲಿ ಸ್ವತಃ ವಾಸ್ತವ್ಯ ಹೂಡಿ ಜನರ ಸಮಸ್ಯೆ ಆಲಿಸುವುದಕ್ಕೂ ವ್ಯತ್ಯಾಸವಿದೆ. ಮುಖ್ಯಮಂತ್ರಿ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹಾರ ಮಾಡುತ್ತಾರೆ ಎಂದಲ್ಲ. ಒಂದು ಗ್ರಾಮದ ಬೇರೆ ಬೇರೆ ವ್ಯವಸ್ಥೆಗಳು ಆ ಕಾರಣದಿಂದ ಚುರುಕಾಗುತ್ತವೆ. ನಿದ್ದೆಗೊಳಗಾಗಿರುವ ಅಧಿಕಾರಿ ವರ್ಗ ಜಾಗೃತವಾಗುತ್ತದೆ. ಕೆಲವು ದಿನಗಳ ಮಟ್ಟಿಗಾದರೂ ಆ ಸಂಚಲನ ಗ್ರಾಮದಲ್ಲಿರುತ್ತದೆ. ಮುಖ್ಯಮಂತ್ರಿ ಮತ್ತು ಜನಸಾಮಾನ್ಯರ ನಡುವೆ ಗೋಡೆಗಳಂತಿರುವ ರಾಜಕೀಯ ಕಾರ್ಯಕರ್ತರು ಮತ್ತು ಅಧಿಕಾರಿವರ್ಗಗಳನ್ನು ಮೀರಿ ಜನಸಾಮಾನ್ಯರು ಮುಖ್ಯಮಂತ್ರಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ರಾಜಕಾರಣಿಗಳು ಮತ್ತು ಶ್ರೀಸಾಮಾನ್ಯರ ನಡುವಿನ ಅಂತರ ಕಡಿಮೆಯಾಗುತ್ತದೆ. ಆದರೆ ಬಹುತೇಕ ಗ್ರಾಮ ವಾಸ್ತವ್ಯ ಈ ಉದ್ದೇಶವನ್ನು ಸಾಧಿಸುವುದಿಲ್ಲ ಎನ್ನುವುದನ್ನೂ ನಾವು ಗುರುತಿಸಬೇಕಾಗಿದೆ.

ಜನರನ್ನು ತಲುಪಲು ಮುಖ್ಯಮಂತ್ರಿ ಪ್ರಯತ್ನಿಸಿದರೂ ಕೆಲವೊಮ್ಮೆ ಅಧಿಕಾರಿ ವರ್ಗ ಅದನ್ನು ವಿಫಲಗೊಳಿಸುತ್ತದೆ. ಮುಖ್ಯಮಂತ್ರಿ ಒಂದು ಗ್ರಾಮಕ್ಕೆ ಆಗಮಿಸುತ್ತಾರೆ ಎಂದಾಕ್ಷಣ ಅಲ್ಲಿ ಅಧಿಕಾರಿ ವರ್ಗ ಬೀಡು ಬಿಡುತ್ತದೆ. ಎಸಿ, ಮಂಚ, ಫ್ಯಾನು ಎಲ್ಲವೂ ಅವರ ಹಿಂದೆಯೇ ಆ ಗ್ರಾಮವನ್ನು ಮೊದಲೇ ತಲುಪುತ್ತವೆ. ಇದೇ ಸಂದರ್ಭದಲ್ಲಿ ಯಾರ್ಯಾರು ಮುಖ್ಯಮಂತ್ರಿಯ ಜೊತೆಗೆ ಮಾತನಾಡಬೇಕು, ಮುಖ್ಯಮಂತ್ರಿಯ ಜೊತೆಗೆ ಏನು ಮಾತನಾಡಬೇಕು ಎನ್ನುವ ‘ಚಿತ್ರ-ಕತೆ’ಯನ್ನೂ ಈ ಅಧಿಕಾರಿಗಳೇ ರಚಿಸಿಕೊಡುತ್ತಾರೆ. ಗ್ರಾಮದಲ್ಲಿ ಗಂಭೀರ ಸಮಸ್ಯೆಗಳಿದ್ದರೆ ಅದನ್ನು ಪ್ರಸ್ತಾಪಿಸದಂತೆಯೂ ಜನರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಪಕ್ಷದ ಕಾರ್ಯಕರ್ತರೇ ಶ್ರೀಸಾಮಾನ್ಯನ ವೇಷದಲ್ಲಿ ಮುಖ್ಯಮಂತ್ರಿಯ ಆಸುಪಾಸಿನಲ್ಲಿ ಓಡಾಡುತ್ತಿರುತ್ತಾರೆ. ಹಾಗೆಯೇ ಕೆಲವೊಮ್ಮೆ ಮುಖ್ಯಮಂತ್ರಿಯವರ ಭೋಪರಾಕ್ ಮಾಡುವುದರಲ್ಲಿ ವಾಸ್ತವ್ಯ ಮುಗಿದು ಹೋಗುತ್ತದೆ. ಬಡವರ ಮನೆಯನ್ನು ಮುಖ್ಯಮಂತ್ರಿಗಾಗಿಯೇ ಅಲಂಕರಿಸಲಾಗುತ್ತದೆ. ಆತುರಾತುರವಾಗಿ ಶೌಚಾಲಯವನ್ನೂ ಕಟ್ಟಿಸಲಾಗುತ್ತದೆ. ಕೆಲವೊಮ್ಮೆ ಊಟವನ್ನೇ ಹೊರಗಿನಿಂದ ಮಾಡಿಸಿ ತರಲಾಗುತ್ತದೆ. ಇಂತಹ ವಾಸ್ತವ್ಯ ಒಂದು ರಾಜಕೀಯ ಪ್ರಹಸನ ಮಾತ್ರ. ಅದರಿಂದಾಗಿ ಆ ಗ್ರಾಮಕ್ಕೆ ಆರ್ಥಿಕ ಹೊರೆಯೇ ಹೊರತು ಇನ್ನೇನು ಪ್ರಯೋಜನವಿಲ್ಲ. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡುವ ಊರನ್ನು ಯಾವ ಕಾರಣಕ್ಕೂ ಮೊದಲೇ ಘೋಷಿಸಬಾರದು.

ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಮನೆಗಳಲ್ಲೋ ಸರಕಾರಿ ಶಾಲೆಗಳಲ್ಲೋ ವಾಸ್ತವ್ಯ ಹೂಡುವ ಧೈರ್ಯವನ್ನು ತೋರಬೇಕು. ಆ ಗ್ರಾಮದ ಸಮಸ್ಯೆಯನ್ನು ಒಂದು ದಿನ ತಾನೂ ಅನುಭವಿಸಬೇಕು. ನೀರಿಲ್ಲದ, ವಿದ್ಯುತ್ ಇಲ್ಲದ, ಸರಿಯಾದ ವಸತಿಯಿಲ್ಲದ ಜನರ ಬದುಕು ಹೇಗಿರುತ್ತದೆ ಎನ್ನುವುದನ್ನು ಒಂದು ದಿನವಾದರೂ ಮುಖ್ಯಮಂತ್ರಿ ಮತ್ತು ಅವರ ಹಿಂದಿರುವ ಕಾರ್ಯಕರ್ತರು ಅನುಭವಿಸಬೇಕು. ಆಗ ಮಾತ್ರ ಜನರ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಲು ಸಾಧ್ಯ. ಎಸಿ, ಫ್ಯಾನು ಮೊದಲಾದ ಐಷರಾಮದ ಜೊತೆಗೆ ಗ್ರಾಮ ವಾಸ್ತವ್ಯ ಮಾಡುವುದು ಬಡವರ ಅಣಕ ಮಾತ್ರವಾಗುತ್ತದೆ. ಅಲ್ಲಿಂದ ಮರಳುವಾಗ ಕನಿಷ್ಠ ಆ ಫ್ಯಾನು, ಎಸಿ, ಮಂಚ ಇತ್ಯಾದಿಗಳನ್ನು ಆ ಮನೆಯ ಒಡೆಯನಿಗೇ ಉಡುಗೊರೆಯಾಗಿ ಕೊಟ್ಟು ಬರುವ ಸೌಜನ್ಯವನ್ನಾದರೂ ತೋರಿಸಬೇಕು. ಈ ಬಾರಿ ನಾಡಿನ ವಿವಿಧ ಸರಕಾರಿ ಶಾಲೆಗಳನ್ನೇ ವಾಸ್ತವ್ಯದ ಮನೆಯನ್ನಾಗಿಸಿದರೆ ಅದು ಆ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಮೇಲೆ ಬೀರುವ ಪರಿಣಾಮ ದೊಡ್ಡದು. ಸರಕಾರಿ ಶಾಲೆಯನ್ನು ಮೇಲೆತ್ತುವ ದೃಷ್ಟಿಯಿಂದ ಈ ಬಾರಿ ಕೇವಲ ಸರಕಾರಿ ಶಾಲೆಗಳನ್ನೇ ಗುರಿಯಾಗಿಸಿಕೊಂಡು ವಾಸ್ತವ್ಯ ಮಾಡಬೇಕು. ಸರಕಾರಿ ಶಾಲೆಗಳು ಉದ್ಧಾರವಾದರೆ ಒಂದು ಗ್ರಾಮ ಉದ್ಧಾರವಾದಂತೆ. ಗ್ರಾಮಗಳು ಉದ್ಧಾರವಾದರೆ ನಾಡು ಉದ್ಧಾರವಾದಂತೆ. ಈ ಬಾರಿಯ ಗ್ರಾಮ ವಾಸ್ತವ್ಯ ಅರ್ಥಪೂರ್ಣವಾಗಲಿ. ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಜನಸಾಮಾನ್ಯರ ಮುಖ್ಯಮಂತ್ರಿಯಾಗಿ ಪರಿವರ್ತಿಸಲು ಇದು ಸಹಾಯ ಮಾಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News