ತಾನು ಬಂದಾಗ ಎದ್ದು ನಿಂತಿಲ್ಲ ಎಂದು ಮೆಡಿಕಲ್ ಸಿಬ್ಬಂದಿಗೆ ಹಲ್ಲೆಗೈದ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆಯ ಸೋದರ

Update: 2019-06-07 05:22 GMT

ಬಿಹಾರ, ಜೂ.7: ತಾನು ಬಂದಾಗ ಎದ್ದು ನಿಂತು ತನ್ನನ್ನು ಸ್ವಾಗತಿಸಿಲ್ಲ ಎಂಬ ಕಾರಣಕ್ಕೆ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಹಾಗೂ ಬಿಹಾರದ ಮಾಜಿ ಸಚಿವೆ ರೇಣು ದೇವಿಯ ಸಹೊದರ ಪಿಣು ಎಂಬಾತ ಬೆಟ್ಟಿಯ ಎಂಬಲ್ಲಿನ ಔಷಧಿಯಂಗಡಿಯ ಸಿಬ್ಬಂದಿ ಮೇಲೆ ಹಲ್ಲೆಗೈದ ಘಟನೆ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಜೆಪಿ ನಾಯಕಿಯ ಸೋದರನ ಕೆಲ ಸ್ನೇಹಿತರೂ ಮೆಡಿಕಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಜೂನ್ 3ರಂದು ಈ ಘಟನೆ ನಡೆದಿದೆಯೆನ್ನಲಾಗಿದೆ. ಎದ್ದು ನಿಂತು ತನ್ನನ್ನು ಸ್ವಾಗತಿಸುವಂತೆ ಪಿಣು ಮೆಡಿಕಲ್ ಸಿಬ್ಬಂದಿಗೆ ಸೂಚಿಸುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ. ಮೆಡಿಕಲ್ ಸಿಬ್ಬಂದಿ ನಿರಾಕರಿಸಿದಾಗ ಪಿಣು ಆತನನ್ನು ಥಳಿಸಿ ನಂತರ ಕಾರಿನಲ್ಲಿ ಆತನನ್ನು ಅಪಹರಿಸುತ್ತಾನೆ. ಸಂತ್ರಸ್ತನನ್ನು ಅಪಹರಿಸಲು ಆರೋಪಿಗಳು ಬಳಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿದ ರೇಣುದೇವಿ, ತಮಗೆ ಪಿಣು ಜತೆ ಯಾವುದೇ ಸಂಬಂಧವಿಲ್ಲ. ತಪ್ಪು ಮಾಡಿದವರು ಯಾರೇ ಆಗಲಿ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

 ‘‘ಕೆಟ್ಟ ನಡತೆಯನ್ನು ನಾನು ಉತ್ತೇಜಿಸುವುದಿಲ್ಲ. ಆತನ ಮನೆಯೊಂದಿಗೆ ಹಲವು ವರ್ಷಗಳಿಂದ ಸಂಬಂಧ ಕಡಿದುಕೊಂಡಿದ್ದೇನೆ. ನಾವಿಬ್ಬರೂ ಮಾತನಾಡುವುದಿಲ್ಲ. ಆದರೂ ನನ್ನನ್ನು ಈ ಘಟನೆಯಲ್ಲಿ ಎಳೆದು ತರಲಾಗಿದೆ. ನಾನು ಅಥವಾ ಬೇರೆ ಯಾರಾದರೂ ತಪ್ಪು ಮಾಡಿದರೂ ಶಿಕ್ಷೆಯಾಗಲೇಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News