ಸಿಧು ಅವರ ಸ್ಥಳೀಯಾಡಳಿತ ಖಾತೆ ವಾಪಸ್ ಪಡೆದ ಪಂಜಾಬ್ ಸಿಎಂ ಅಮರೀಂದರ್ ಸಿಂಗ್

Update: 2019-06-07 07:14 GMT

ಚಂಡೀಗಢ, ಜೂ.7: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಅವರ ಸಚಿವ ನವಜೋತ್ ಸಿಂಗ್ ಸಿಧು ನಡುವೆ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ವೈಮನಸ್ಸಿನ ಫಲವೆಂಬಂತೆ ಇದೀಗ ಸಿಧು ಅವರಿಂದ ಸ್ಥಳೀಯಾಡಳಿತ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ವ್ಯವಹಾರಗಳ ಸಚಿವಾಲಯವನ್ನು ಕಿತ್ತುಕೊಳ್ಳಲಾಗಿದೆ. ಸಿದ್ದು ಅವರಿಗೆ ಇಂಧನ ಮತ್ತು ಹೊಸ ಮತ್ತು ಮರುಬಳಕೆಯೋಗ್ಯ ಇಂಧನ ಸಂಪನ್ಮೂಲಗಳ ಸಚಿವಾಲಯದ ಜವಾಬ್ದಾರಿಯನ್ನು ವಹಿಸಲಾಗಿದೆ.

ಗಣಿಗಾರಿಕೆ ಹಗರಣದ ನಂತರ 2017ರಲ್ಲಿ ಕಪೂರ್ತಲ ಶಾಸಕ ರಾಣಾ ಗುರ್ಜೀತ್ ಸಿಂಗ್ ರಾಜೀನಾಮೆ ನೀಡಿದಂದಿನಿಂದ ಸಿಧು ಅವರಿಗೆ ಈಗ ನೀಡಲಾದ ಖಾತೆಗಳು ಮುಖ್ಯಮಂತ್ರಿಯ ಬಳಿಯೇ ಇದ್ದವು.

ನಗರ ಪ್ರದೇಶಗಳಾದ ಭಟಿಂಡ ಹಾಗೂ ಸಂಗ್ರೂರ್ ನಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿರುವುದಕ್ಕೆ ಸಿಧು ಅವರನ್ನೇ ದೂಷಿಸಿದ್ದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಸಿಧು ಅವರ ಖಾತೆ ಬದಲಾಯಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿದ್ದರು.

ಗುರುವಾರ ನಡೆದ ಪಂಜಾಬ್ ಸಚಿವ ಸಂಪುಟದ ಸಭೆಯಲ್ಲಿ ಸಿಧು ಭಾಗವಹಿಸಿರಲಿಲ್ಲ. ಸಭೆ ನಡೆದು ಕೆಲವೇ ಗಂಟೆಗಳಲ್ಲಿ ಖಾತೆಗಳ ಮರು ಹಂಚಿಕೆ ನಡೆದಿದೆ. ನಗರ ಪ್ರದೇಶಗಳು ಪಕ್ಷದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಹೇಳಿರುವ ಸಿಧು, ಸಚಿವರ ಪೈಕಿ ತಮ್ಮನ್ನು ಮಾತ್ರ ಪಕ್ಷದ ವೈಫಲ್ಯಕ್ಕೆ ದೂರಲಾಗಿರುವುದರಿಂದ ತಾವು ಸಭೆಯಲ್ಲಿ ಭಾಗವಹಿಸಿಲ್ಲ ಎಂದು ನಂತರ ಹೇಳಿಕೆ ನೀಡಿದ್ದರು.

ಚುನಾವಣೆ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಸಿಧು ಅವರನ್ನು ಕೈಬಿಡಬೇಕೆಂದು ಹಲವು ಸಚಿವರು ಆಗ್ರಹಿಸಿದ್ದರೆಂದು ಮೂಲಗಳು ತಿಳಿಸಿವೆ.

ಪಂಜಾಬ್ ಸಚಿವ ಸಂಪುಟದ ಹಲವಾರು ಸಚಿವರ ಖಾತೆ ಬದಲಾವಣೆಗಳೂ ನಡೆದಿವೆ. ಸಿದ್ದು ಅವರ ಬಳಿಯಿದ್ದ ಪ್ರಮುಖ ಸ್ಥಳೀಯಾಡಳಿತ ಖಾತೆ ಈಗ ಮಾಜಿ ಆರೋಗ್ಯ ಸಚಿವ ಬ್ರಹ್ಮ್ ಮೊಹಿಂದ್ರ ಅವರ ಪಾಲಾಗಿದ್ದರೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ವ್ಯವಹಾರಗಳ ಸಚಿವಾಲಯವು ಚರಣ್ ಜಿತ್ ಸಿಂಗ್ ಚನ್ನಿ ಅವರಿಗೆ ತಾಂತ್ರಿಕ ಶಿಕ್ಷಣ ಖಾತೆಯೊಂದಿಗೆ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News