ರಾಜ್ಯದಲ್ಲಿ ಮರಳಿನ ಕೊರತೆ ತಪ್ಪಿಸಲು ‘ಸ್ಯಾಂಡ್ ಬಝಾರ್’: ಸಚಿವ ಯು.ಟಿ.ಖಾದರ್

Update: 2019-06-07 13:17 GMT

ಬೆಂಗಳೂರು, ಜೂ. 7: ರಾಜ್ಯದಲ್ಲಿ ಮರಳಿನ ಕೊರತೆ ತಪ್ಪಿಸಲು ಹಾಗೂ ಮರಳಿನ ಬೆಲೆ ನಿಯಂತ್ರಣಕ್ಕೆ ದಕ್ಷಿಣ ಕನ್ನಡದಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ‘ಸ್ಯಾಂಡ್ ಬಝಾರ್’ ಅನ್ನು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡದಲ್ಲಿ ನೂತನವಾಗಿ ಆರಂಭಿಸಿರುವ ಸ್ಯಾಂಡ್ ಬಝಾರ್ ಆ್ಯಪ್‌ನಿಂದ ಮರಳು ಮಾಫಿಯಾಕ್ಕೆ ಕಡಿವಾಣ ಬಿದ್ದಿದೆ. ಅಲ್ಲದೆ, ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಮರಳು ಸಿಗುತ್ತಿದೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಹಕರಿಗೆ ಕಡಿಮೆ ದರ ಮತ್ತು ಸುಲಭವಾಗಿ ಅವರ ಮನೆ ಬಾಗಿಲಿಗೆ ಮರಳು ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಸರಕಾರ ‘ಸ್ಯಾಂಡ್ ಬಝಾರ್’ ಆ್ಯಪ್ ಆರಂಭಿಸಿದೆ. ಮರಳಿನ ಅಗತ್ಯ ಇರುವ ಗ್ರಾಹಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆ, ವಿಳಾಸ ನೀಡಿ ಹೆಸರು ನೋಂದಣಿ ಮಾಡಿಕೊಳ್ಳಬೇಕು.

ಹೀಗೆ ನೋಂದಣಿ ಬಳಿಕ ಅವರ ಮೊಬೈಲ್ ಸಂಖ್ಯೆಗೆ ಸಂದೇಶ ಬರುತ್ತದೆ. ಎಲ್ಲಿ ಮರಳಿನ ಲಭ್ಯತೆ ಇದೆ, ಬೆಲೆ ಇತರೆ ವಿವರಗಳ ಮಾಹಿತಿ ನೀಡಲಿದೆ. ಗ್ರಾಹಕರು ಎಷ್ಟು ಮರಳು ಬೇಕೆಂದು ಹಣ ಪಾವತಿಸಿದರೆ, 48 ಗಂಟೆಯಲ್ಲೇ ಮನೆ ಬಾಗಿಲಿಗೆ ಮರಳು ಬರಲಿದೆ ಎಂದು ಅವರು ತಿಳಿಸಿದರು.

ಮರಳು ಸರಬರಾಜುದಾರರಿಗೆ ಮತ್ತು ಮರಳು ಸಾಗಿಸುವವರಿಗೆ ಆನ್‌ಲೈನ್ ಮೂಲಕವೇ ಸರಕಾರವೇ ಹಣ ಪಾವತಿಸಲಾಗುತ್ತದೆ. ಗ್ರಾಹಕರಿಗೆ ಅವರ ಕೈಗೆಟಕುವ ದರದಲ್ಲಿ ಮರಳು ದೊರೆಯುತ್ತದೆ. ಮರಳು ಸಾಗಿಸುವ ವಾಹನಕ್ಕೆ ಪ್ರತಿ ಕಿ.ಮೀ.ಗೆ 50ರೂ.ನಿಗದಿ ಪಡಿಸಲಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ನೈಸರ್ಗಿಕವಾಗಿ ಲಭ್ಯವಿರುವ ಮರಳಿನ ಬ್ಲಾಕ್‌ಗಳನ್ನು ಗುರುತಿಸಿ ಗ್ರಾಹಕರಿಗೆ ಮರಳು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ‘ಸ್ಯಾಂಡ್ ಬಝಾರ್’ ಆ್ಯಪ್ ಚಾಲ್ತಿಯಲ್ಲಿದ್ದು, ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ವಿವರಿಸಿದರು.

ಗಡಿಭಾಗದಲ್ಲಿ ಸಿಸಿಟಿವಿ

‘ಕರಾವಳಿ ಪ್ರದೇಶದ ಗಡಿಭಾಗದಲ್ಲಿ ಅಕ್ರಮ ಮರಳು ಸಾಗಣೆ ಸೇರಿದಂತೆ ಇನ್ನಿತರ ಚಟುವಟಿಕೆಗಳ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾ ಅಳವಡಿಸಲು ಉದ್ದೇಶಿಸಿದ್ದು, ಇದರಿಂದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ಈಗಾಗಲೇ ಈ ಕಾರ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ’

-ಯು.ಟಿ.ಖಾದರ್, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News