ಮಹಾತ್ಮ ಗಾಂಧಿಯ ಅಪಹಾಸ್ಯ ದೇಶದ ದುರಂತ: ವಾಟಾಳ್ ನಾಗರಾಜ್ ಖಂಡನೆ

Update: 2019-06-07 13:26 GMT

ಬೆಂಗಳೂರು, ಜೂ.7: ಸತ್ಯ ಅಹಿಂಸೆಯಂತಹ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನೇ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಡಲು ಅಸ್ತ್ರಗಳನ್ನಾಗಿ ಬಳಸಿದ ಮಹಾತ್ಮ ಗಾಂಧಿಯನ್ನು ಅಪಹಾಸ್ಯ ಮಾಡುತ್ತಿರುವುದು ದೇಶದ ದುರಂತ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತೀವ್ರವಾಗಿ ಖಂಡಿಸಿದರು

ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಆಳೆತ್ತರದ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇಟ್ಟು ಪುಷ್ಪನಮನ ಸಲ್ಲಿಸಿ ಕೆಂಪೇಗೌಡ ವೃತ್ತದವರೆಗೆ ಮೆರವಣಿಗೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಮಾನ ಮಾಡುವಂತಹ ಚಟುವಟಿಕೆಗಳು ಇತ್ತೀಚೆಗೆ ನಡೆಯುತ್ತಿರುವುದು ಅತ್ಯಂತ ಖಂಡನೀಯವಾಗಿದ್ದು, ವಿಶ್ವಮಾನ್ಯ ಬಾಪು ಅವರ ಹೆಸರು ಉಳಿಸಲು ನಿರಂತರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರು ಗಾಂಧೀಜಿಯವರನ್ನು ರೈಲಿನಿಂದ ತಳ್ಳಿ ಅವಮಾನಗೊಳಿಸಿದರು. ಇದನ್ನೇ ಸವಾಲಾಗಿ ಸ್ವೀಕರಿಸಿ ಕರಿಯರ ಪರವಾಗಿ ಹೋರಾಟ ನಡೆಸಿ ಅಲ್ಲಿಂದ ಬಂದು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸ್ವಾಭಿಮಾನಿ ಗಾಂಧೀಜಿಯವರ ಪರವಾಗಿ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿರುವುದು ಅತ್ಯಂತ ಖಂಡನೀಯ ಎಂದು ತಿಳಿಸಿದರು.

ಇತ್ತೀಚೆಗೆ ಸಂಸದರೊಬ್ಬರು ಗಾಂಧೀಜಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಬೇಕು. ಮಹಾತ್ಮ ಗಾಂಧೀಜಿ ಅವರ ಪ್ರಭಾವ ವಿಶ್ವಮಾನ್ಯಗೊಂಡಿದೆ. ಅಂತಹವರನ್ನು ನಾವು ಆರಾಧಿಸಬೇಕು. ಆದರೆ, ಕೆಲವರು ಅವರನ್ನು ಟೀಕಿಸುವ, ನಿಂದಿಸುವ ಕೆಲಸ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದು ವಿಷಾದಿಸಿದರು.

ಗಾಂಧಿ ಹೆಸರನ್ನು ಉಳಿಸುವುದು, ಭ್ರಷ್ಟಾಚಾರವನ್ನು ಅಳಿಸುವುದು, ಅವರ ತತ್ತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ವಾಟಾಳ್ ಹೇಳಿದರು.

ಮಹಾರಾಷ್ಟ್ರದ ಐಎಎಸ್ ಅಧಿಕಾರಿ ನಿಧಿ ಚೌಧರಿ ಎಂಬುವವರು ಪ್ರಪಂಚದಾದ್ಯಂತ ಗಾಂಧೀಜಿ ಅವರ ಪ್ರತಿಮೆಗಳನ್ನು ತೆಗೆಯಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಸರಕಾರಿ ಕೆಲಸದಿಂದ ವಜಾ ಮಾಡಬೇಕು.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News