ಮಾನನಷ್ಟ ಮೊಕದ್ದಮೆ: ಜುಲೈ 16ರಂದು ಹಾಜರಾಗಲು ಕೇಜ್ರಿವಾಲ್‌ಗೆ ಸೂಚನೆ

Update: 2019-06-07 18:00 GMT

ಹೊಸದಿಲ್ಲಿ, ಜೂ. 7: ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಜುಲೈ 16ರಂದು ತನ್ನ ಮುಂದೆ ಹಾಜರಾಗುವಂತೆ ದಿಲ್ಲಿ ನ್ಯಾಯಾಲಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸೂಚಿಸಿದೆ. ಮತದಾರರ ಪಟ್ಟಿ ತಿರುಚಲಾಗಿದೆ ಎಂಬ ಕೇಜ್ರಿವಾಲ್ ಅವರ ಹೇಳಿಕೆ ಕುರಿತಂತೆ ಬಿಜೆಪಿ ನಾಯಕ ರಾಜೀವ್ ಬಬ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

 ಕೇಜ್ರಿವಾಲ್ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಆದಾಗ್ಯೂ, ದೂರಿನಲ್ಲಿ ಹೆಸರಿಸಲಾದ ಆಪ್‌ನ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಗುಪ್ತಾ, ಶಾಸಕ ಮನೋಜ್ ಕುಮಾರ್ ಹಾಗೂ ಪಕ್ಷದ ವಕ್ತಾರೆ ಅತಿಶಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 10 ಸಾವಿರ ರೂ ವೈಯುಕ್ತಿಕ ಬಾಂಡ್‌ಗಳನ್ನು ನೀಡುವಂತೆ ಮೂವರಿಗೂ ಆದೇಶಿಸಿದೆ. ದಿಲ್ಲಿಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಅಳಿಸಲು ಕಾರಣ ಬಿಜೆಪಿ ಎಂದು ಪ್ರತಿಪಾದಿಸುವ ಮೂಲಕ ಆಪ್‌ನ ನಾಲ್ವರು ನಾಯಕರು ಬಿಜೆಪಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಬಬ್ಬರ್ ದೂರಿನಲ್ಲಿ ಆರೋಪಿಸಿದ್ದಾರೆ. ಸಮಾಜದ ನಿರ್ದಿಷ್ಟ ವರ್ಗಕ್ಕೆ ಸೇರಿದ ಮತದಾರರಲ್ಲಿ ಬಿಜೆಪಿ ಕುರಿತು ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಏಕೈಕ ಉದ್ದೇಶದಿಂದ ಆರೋಪಿಗಳು ಬಿಜೆಪಿ ವಿರುದ್ಧ ಈ ಹೇಳಿಕೆ ನೀಡಿದ್ದಾರೆ ಎಂದು ಬಬ್ಬರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News