ವಿಶ್ವಕಪ್‌ನಿಂದ ಶಹಝಾದ್ ಹೊರಕ್ಕೆ: ಅಫ್ಘಾನಿಸ್ತಾನಕ್ಕೆ ಹಿನ್ನಡೆ

Update: 2019-06-07 18:45 GMT

ಲಂಡನ್, ಜೂ.7: ಮಂಡಿನೋವಿನಿಂದ ಬಳಲುತ್ತಿರುವ ವಿಕೆಟ್‌ಕೀಪರ್-ದಾಂಡಿಗ ಮುಹಮ್ಮದ್ ಶಹಝಾದ್ ಈಗ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್‌ನಿಂದ ಹೊರಗುಳಿದಿದ್ದಾರೆ. ಈ ಬೆಳವಣಿಗೆಯು ಅಫ್ಘಾನಿಸ್ತಾನಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಅಫ್ಘಾನ್‌ನ ಖ್ಯಾತ ವಿಕೆಟ್‌ಕೀಪರ್ ಶಹಝಾದ್ ಬದಲಿಗೆ 15 ಸದಸ್ಯರ ತಂಡದಲ್ಲಿರುವ 18ರ ಹರೆಯದ ಆಟಗಾರ ಇಕ್ರಂ ಅಲಿ ಖಿಲ್ ಆಡಲಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬದಲಿ ಆಟಗಾರನನ್ನು ಆಡಿಸಲು ಅಫ್ಘಾನ್‌ಗೆ ಅನುಮತಿ ನೀಡಿದೆ. ಅಫ್ಘಾನ್ ತಂಡ ಟೂರ್ನಿಯಲ್ಲಿ ಈ ತನಕ ಆಡಿರುವ ಎರಡೂ ಪಂದ್ಯಗಳನ್ನು ಸೋತಿದೆ.

 32ರ ಹರೆಯದ ಶಹಝಾದ್ ಅಫ್ಘಾನ್ ತಂಡ ಏಕದಿನ ಕ್ರಿಕೆಟ್‌ನ ವಿಶ್ವ ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು. ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಪ್ರಮುಖ ಸದಸ್ಯರಾಗಿದ್ದರು.

ಉತ್ತಮ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಹಝಾದ್ ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದರು.ಕಳೆದ ತಿಂಗಳು ಬೆಲ್‌ಫಾಸ್ಟ್‌ನಲ್ಲಿ ಐರ್ಲೆಂಡ್ ವಿರುದ್ಧ ಶತಕ ಗಳಿಸಿ ವಿಶ್ವಕಪ್‌ಗೆ ಉತ್ತಮ ತಯಾರಿ ನಡೆಸಿದ್ದರು.

ಈಗ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ಶಹಝಾದ್ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಬ್ರಿಸ್ಟಾಲ್‌ನಲ್ಲಿ ನಡೆದ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಮೊದಲ ವಿಶ್ವಕಪ್ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಶಹಝಾದ್ ಶ್ರೀಲಂಕಾ ವಿರುದ್ಧ ಕಾರ್ಡಿಫ್‌ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ 7 ರನ್ ಗಳಿಸಿ ಔಟಾಗಿದ್ದರು.

ಮಾರ್ಚ್‌ನಲ್ಲಿ ಐರ್ಲೆಂಡ್ ವಿರುದ್ಧ ಚೊಚ್ಚಲ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದ ಇಕ್ರಂ ಅಲಿ ಕೇವಲ 2 ಸೀಮಿತ ಓವರ್ ಪಂದ್ಯ ಆಡಿದ್ದಾರೆ. ಅಫ್ಘಾನಿಸ್ತಾನ ಶನಿವಾರ 2015ರ ಫೈನಲಿಸ್ಟ್ ನ್ಯೂಝಿಲ್ಯಾಂಡ್ ಸವಾಲು ಎದುರಿಸಲಿದೆ. ನ್ಯೂಝಿಲ್ಯಾಂಡ್ ಮೊದಲೆರಡು ಪಂದ್ಯಗಳಲ್ಲಿ ಅಜೇಯವಾಗುಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News