​ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನತೆಗೆ ರಾಹುಲ್‌ ಗಾಂಧಿ ಹೇಳಿದ್ದೇನು ?

Update: 2019-06-08 03:57 GMT

ವಯನಾಡ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ಹೊಸ ಕಾರ್ಯ ಕ್ಷೇತ್ರ ವಯನಾಡ್‌ಗೆ ಶುಕ್ರವಾರ ಮೂರು ದಿನಗಳ ಭೇಟಿಗಾಗಿ ಆಗಮಿಸಿದರು. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಾಹುಲ್, ತಮ್ಮ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಆಗಮಿಸಿದ್ದಾರೆ.

ಉತ್ತರ ಪ್ರದೇಶದ ಅಮೇಠಿ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿದ್ದ ರಾಹುಲ್ ಈ ಬಾರಿ ಸ್ಮೃತಿ ಇರಾನಿ ವಿರುದ್ಧ ಪರಾಭವಗೊಂಡಿದ್ದರು. ಆದರೆ ವಯನಾಡ್ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಗೆಲುವು ಸಾಧಿಸಿದ್ದರು.

ಶುಕ್ರವಾರ ರಾಹುಲ್ ಆಗಮಿಸಿದಾಗ ಸುರಿಯುತ್ತಿದ್ದ ಭಾರಿ ಮಳೆಯ ನಡುವೆಯೂ ಪಕ್ಷದ ಕಾರ್ಯಕರ್ತರು ರಸ್ತೆಗಳಲ್ಲಿ ನಿಂತು ಕಾಂಗ್ರೆಸ್ ಪರ ಘೋಷಣೆ ಕೂಗಿದರು. "ಪಕ್ಷ ಹಾಗೂ ದೇಶಕ್ಕೆ ನೀವಷ್ಟೇ ಭರವಸೆ" ಎಂಬ ವಾಕ್ಯದ ಬ್ಯಾನರ್‌ಗಳು ಕಾಣಿಸಿಕೊಂಡವು. ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚನ್ನಿತ್ತಲ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಅಗ್ರ ನಾಯಕರು ರಾಹುಲ್ ಅವರನ್ನು ಬರಮಾಡಿಕೊಂಡರು.

ಮಲಪ್ಪುರಂ ಜಿಲ್ಲೆಯ ವಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಲ್ಲಿಕಾವು ಎಂಬಲ್ಲಿ ಮೊದಲ ರೋಡ್‌ಶೋ ನಡೆಸಿದ ರಾಹುಲ್, "ನಾನು ನಿಮಗೆ ಚಿರಋಣಿ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನೀವು ಇಟ್ಟ ವಿಶ್ವಾಸ ಉಳಿಸಿಕೊಳ್ಳುತ್ತೇನೆ" ಎಂದು ಹೇಳಿದರು. 100ಕ್ಕೂ ಹೆಚ್ಚು ವಾಹನಗಳ ಬೆಂಗಾವಿನೊಂದಿಗೆ ಆಗಮಿಸಿದ ರಾಹುಲ್ ಅವರು, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ತೆರೆದ ವಾಹನದಲ್ಲಿ ರೋಡ್‌ಶೋ ನಡೆಸಿದರು.

"ನಿಮ್ಮ ಕಾರಣಕ್ಕಾಗಿ ಸಂಸತ್ತಿನ ಒಳಗೆ ಹಾಗೂ ಹೊರಗೆ ನಾನು ಹೋರಾಡುತ್ತೇನೆ. ನಮ್ಮ ಮೊದಲ ಕಾಳಜಿ ನೀವು" ಎಂದು ರಾಹುಲ್ ಭಾವುಕರಾಗಿ ನುಡಿದರು. ನೀಲಾಂಬೂರು ಎಂಬಲ್ಲಿ ಚಹಾ ಸೇವಿಸಿದ ರಾಹುಲ್, ರಸ್ತೆಬದಿ ಚಹಾ ಅಂಗಡಿ ಮಾಲೀಕರೊಬ್ಬರ ಜತೆ ಫೋಟೊಗೆ ಹಾಗೂ ಕಾರ್ಯಕರ್ತರ ಸೆಲ್ಫಿಗೆ ಫೋಸ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News