ಇದು ಈಶಾನ್ಯ ಭಾರತದ ಮೊಟ್ಟಮೊದಲ ರಾಷ್ಟ್ರೀಯ ಪಕ್ಷ !

Update: 2019-06-08 04:03 GMT

ಗುವಾಹತಿ: ಮೇಘಾಲಯ ಮುಖ್ಯಮಂತ್ರಿ ಕೋರ್ನಾಡ್ ಕೆ. ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ)ಗೆ ಶುಕ್ರವಾರ ಭಾರತದ ಚುನಾವಣಾ ಆಯೋಗ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಿದೆ.

ರಾಷ್ಟ್ರೀಯ ಪಕ್ಷವಾಗಲು ನಿಗದಿಪಡಿಸಿದ ಮಾನದಂಡವನ್ನು ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಹಾಗೂ ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ವೇಳೆ ತಲುಪಿದ ಹಿನ್ನೆಲೆಯಲ್ಲಿ ಈ ಮಾನ್ಯತೆ ನೀಡಲಾಗಿದೆ. ಇದರೊಂದಿಗೆ ಎನ್‌ಪಿಪಿ, ಈಶಾನ್ಯ ಭಾರತದಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದ ಮೊಟ್ಟಮೊದಲ ಪ್ರಾದೇಶಿಕ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೇಘಾಲಯ ಮುಖ್ಯಮಂತ್ರಿಯವರ ತಂದೆ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಪುರ್ನೋ ಅಜಿತೋಕ್ ಸಂಗ್ಮಾ ಅವರು 2013ರಲ್ಲಿ ಪಕ್ಷ ಆರಂಭಿಸಿದ್ದರು. ಪಿ.ಎ.ಸಂಗ್ಮಾ ರಾಷ್ಟ್ರ ರಾಜಕಾರಣದಲ್ಲಿ ಮಹಾನ್ ನಾಯಕನಾಗಿ ಮಿಂಚಿದವರು.

ನಿನ್ನೆಯವರೆಗೂ ಎನ್‌ಪಿಪಿ, ಮಣಿಪುರ, ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ರಾಜ್ಯಪಕ್ಷದ ಸ್ಥಾನಮಾನ ಪಡೆದಿತ್ತು. ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆಲ್ಲುವ ಮೂಲಕ ಅಲ್ಲೂ ರಾಜ್ಯ ಪಕ್ಷದ ಸ್ಥಾನಮಾನ ಪಡೆದಿತ್ತು.

"ತಂದೆ ದಿವಂಗತ ಪಿ.ಎ.ಸಂಗ್ಮಾ ಅವರು ಹುಟ್ಟುಹಾಕಿದ ಪಕ್ಷಕ್ಕೆ ಅರ್ಹವಾದ ಸ್ಥಾನಮಾನ ಸಿಕ್ಕಿರುವುದು ಅಪಾರ ಸಂತಸ ತಂದಿದೆ. ಇದು ಕೇವಲ ಎನ್‌ಪಿಪಿ ಸಾಧನೆ ಮಾತ್ರವಲ್ಲ; ಪಕ್ಷದ ಮೇಲೆ ವಿಶ್ವಾಸ ಇರಿಸಿ ಪಕ್ಷದ ಬೆಂಬಲಕ್ಕೆ ನಿಂತ ಇಡೀ ಈಶಾನ್ಯ ಭಾರತದ ಜನರ ಸಾಧನೆ" ಎಂದು ಸಂಗ್ಮಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News