ಫರೀದಾಬಾದ್ ನ ಶಾಲಾ ಕಟ್ಟಡದಲ್ಲಿ ಬೆಂಕಿ ಆಕಸ್ಮಿಕ; ಇಬ್ಬರು ಮಕ್ಕಳು ಸೇರಿದಂತೆ ಮೂರು ಮಂದಿ ಮೃತ್ಯು

Update: 2019-06-08 17:47 GMT

ಹೊಸದಿಲ್ಲಿ, ಜೂ.8: ಹೊಸದಿಲ್ಲಿಯ ಸಮೀಪದ ಫರೀದಾಬಾದ್‌ನ ಖಾಸಗಿ ಶಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಇಬ್ಬರು ಮಕ್ಕಳ ಸಹಿತ ಮೂವರು ಮೃತಪಟ್ಟಿದ್ದಾರೆ.

ಫರೀದಾಬಾದ್‌ನ ಡುಬುವಾ ಕಾಲೊನಿಯಲ್ಲಿ ಶನಿವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಶಾಲೆಯಿದ್ದ ಕೆಳ ಅಂತಸ್ತಿನಲ್ಲಿರುವ ಬಟ್ಟೆಗಳ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲಿ ವಿಸ್ತರಿಸಿದೆ. ಬೇಸಿಗೆ ರಜೆಯ ಕಾರಣ ಶಾಲೆ ಮುಚ್ಚಲಾಗಿತ್ತು. ಆದರೆ ಶಾಲೆಯಲ್ಲಿ ಬೋಧಕಿಯಾಗಿರುವ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಶಾಲೆಯಲ್ಲೇ ವಾಸಿಸುತ್ತಿದ್ದು ಮೂವರೂ ಬೆಂಕಿಯ ಜ್ವಾಲೆಗೆ ಸಿಕ್ಕಿದ್ದಾರೆ . ಈ ಸಂದರ್ಭದಲ್ಲಿ ಸ್ಥಳೀಯರು ಹರಸಾಹಸ ಪಟ್ಟು ಮೂವರನ್ನೂ ಶಾಲೆಯ ಮಾಡಿನ ಮೂಲಕ ಹೊರಗೆ ತಂದರೂ ತೀವ್ರ ಸುಟ್ಟಗಾಯಗಳಾಗಿದ್ದ ಮೂವರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರನ್ನು ರಕ್ಷಿಸುವ ಪ್ರಯತ್ನದಲ್ಲಿ ಇಬ್ಬರು ಸ್ಥಳೀಯರಿಗೂ ಸುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರೂ ಅವರು ಸ್ಥಳಕ್ಕೆ ವಿಳಂಬವಾಗಿ ಆಗಮಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News