ಈ ಮಹಿಳೆಯ ಭಾರತ ಪೌರತ್ವ ಕನಸಿಗೆ ಬಾಲಾಕೋಟ್ ತಡೆಯಾದ್ದು ಹೇಗೆ ಗೊತ್ತೇ ?

Update: 2019-06-09 04:15 GMT

ಹೈದರಾಬಾದ್: ಕಳೆದ ಏಳು ವರ್ಷಗಳಿಂದ ಭಾರತದಲ್ಲಿ ವಾಸವಿರುವ ಪಾಕಿಸ್ತಾನಿ ಪ್ರಜೆ ಸಮೈರಾ ಫಾರೂಕಿ ಭಾರತದ ಪೌರತ್ವಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಬಾಲಕೋಟ್ ವಾಯುದಾಳಿ ಇವರ ಕನಸಿಗೆ ಅಡ್ಡಿಯಾಗಿದೆ. ಬಹುಶಃ ಈ ಮಹಿಳೆ ಭಾರತೀಯ ಪ್ರಜೆ ಎನಿಸಿಕೊಳ್ಳಲು ಇನ್ನೂ ಏಳು ವರ್ಷ ಕಾಯಬೇಕಾದ ಸ್ಥಿತಿ ಎದುರಾಗಿದೆ.

ಸಮೈರಾ (36) ಅವರು 2011ರಲ್ಲಿ ಹೈದರಾಬಾದ್‌ನ ಅಝರ್ ಮೊಹಿಯುದ್ದೀನ್ ಎಂಬುವವರನ್ನು ಕರಾಚಿಯಲ್ಲಿ ವಿವಾಹವಾಗಿದ್ದರು. ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ಏಳು ವರ್ಷಗಳಿಂದ ಭಾರತದಲ್ಲಿ ವಾಸವಿರಬೇಕು. ಈ ಅವಧಿಯನ್ನು ಈಗಾಗಲೇ ಸಮೈರಾ ಪೂರೈಸಿದ್ದಾರೆ.

ಬಾಲಾಕೋಟ್ ವಾಯುದಾಳಿಗೆ ಸ್ವಲ್ಪ ಕಾಲ ಮೊದಲು ಸಮೈರಾ, ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಇಬ್ಬರು ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು. ಈ ಇಬ್ಬರೂ ಮಕ್ಕಳು ಭಾರತದಲ್ಲೇ ಹುಟ್ಟಿರುವುದರಿಂದ ಭಾರತೀಯ ಪೌರತ್ವ ಪಡೆದಿದ್ದಾರೆ. ಫೆಬ್ರುವರಿ 27ರಂದು ಅಂದರೆ ಸರ್ಜಿಕಲ್ ದಾಳಿ ನಡೆದ ಮರುದಿನ ಲಾಹೋರ್- ದೆಹಲಿ ವಿಮಾನದಲ್ಲಿ ಅವರು ಭಾರತಕ್ಕೆ ವಾಪಸ್ಸಾಗಬೇಕಿತ್ತು. ಆದರೆ ಉಭಯ ದೇಶಗಳ ನಡುವೆ ವಾಯುಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅವರು ಅಲ್ಲೇ ಉಳಿಯಬೇಕಾಯಿತು.

ಮರು ಪ್ರಯಾಣ ಸಾಧ್ಯವಾಗದೇ ಇದ್ದ ಕಾರಣ ನಾನು ಪಾಕಿಸ್ತಾನದಲ್ಲೇ ಅವಧಿ ಮೀರಿ ಉಳಿಯಬೇಕಾಯಿತು. ಉಭಯ ದೇಶಗಳು ವಾಯುಪ್ರದೇಶದ ನಿರ್ಬಂಧ ವಿಧಿಸಿದ ಕಾರಣದಿಂದ ವಿಮಾನ ದೆಹಲಿಗೆ ಹೊರಡಲಿಲ್ಲ. ನಾನು ದುಬೈವರೆಗೆ ಪ್ರಯಾಣಿಸಲು ಅವಕಾಶ ನೀಡುವಂತೆ ಕೋರಿದ್ದರೂ ಅವಕಾಶವಾಗದೇ ಲಾಹೋರ್‌ನಲ್ಲೇ ಉಳಿಯಬೇಕಾಯಿತು" ಎಂದು ಸುಮೈರಾ ಹೇಳಿದ್ದಾರೆ.

ಮೂರು ದಿನದಲ್ಲಿ ಅವರ ಭಾರತೀಯ ವೀಸಾ ಅವಧಿ ಮುಗಿಯಿತು. ಸುಮೈರಾ ಮೂರು ತಿಂಗಳ ಅವಧಿಗಾಗಿ 2018ರ ಡಿಸೆಂಬರ್ 4ರಂದು ಪಾಕಿಸ್ತಾನಕ್ಕೆ ತೆರಳಿದ್ದರು. ಇದಾದ ಬಳಿಕ ಹೊಸ ವೀಸಾಗೆ ಅರ್ಜಿ ಸಲ್ಲಿಸಿ ಜೂನ್ 1ರಂದು ಭಾರತಕ್ಕೆ ಮರಳಿದ್ದಾರೆ.

ನಿಯಮಾವಳಿಯಂತೆ ಶಂಸಾಬಾದ್‌ನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಜೂನ್ 2ರಂದು ತೆರಳಿದರು. ಆದರೆ ಪಾಕಿಸ್ತಾನದಲ್ಲಿ ಅವಧಿ ಮೀರಿ ನಿಂತ ಕಾರಣದಿಂದ ಅವರ ಕಡತ ಮುಚ್ಚಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆದ್ದರಿಂದ ಭಾರತೀಯ ಪೌರತ್ವಕ್ಕೆ ಅವರು ಹೊಸ ಅರ್ಜಿ ಸಲ್ಲಿಸಬೇಕಿದೆ.

"ಅದು ನನ್ನ ಪ್ರಮಾದ ಅಲ್ಲ; ತಾಂತ್ರಿಕವಾಗಿ, ಫೆಬ್ರವರಿ 27ರ ವಿಮಾನದಲ್ಲಿ ನಾನು ಭಾರತಕ್ಕೆ ಮರಳಲು ಸಜ್ಜಾಗಿದ್ದೆ. ಆದರೆ ಅಧಿಕಾರಿಗಳು ನನ್ನನ್ನು ವಿಮಾನದಿಂದ ಕೆಳಗಿಳಿಸಿದರು" ಎಂದು ಸುಮೈರಾ ಹೇಳುತ್ತಾರೆ.

ಈ ಹಿನ್ನೆಲೆಯಲ್ಲಿ ತಮಗೆ ನೆರವಾಗುವಂತೆ ಮಹಿಳೆ ಇದೀಗ ಹೈದರಾಬಾದ್‌ನ ಜಂಟಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. "ನನ್ನ ಪತಿ ಭಾರತೀಯ; ಮಕ್ಕಳು ಭಾರತೀಯರು. ನಾನು ಕೂಡಾ ಭಾರತೀಯಳಾಗಲು ಬಯಸಿದ್ದೇನೆ" ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ದೇಶ ವಿಭಜನೆ ಬಳಿಕ ಸುಮೈರಾ ಪೋಷಕರು ಪಾಕಿಸ್ತಾನದಲ್ಲಿ ನೆಲೆಸಿದ್ದರು. ಅವರು ಪತಿ ಅಝರ್ ಅವರ ಪೋಷಕರ ಸಂಬಂಧಿಕರು. ಈ ಕುಟುಂಬ ಸಂಬಂಧದ ಹಿನ್ನೆಲೆಯಲ್ಲಿ ಅಝರ್ ಹಾಗೂ ಸುಮೈರಾ 2011ರಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟಿದ್ದರು. ಬಳಿಕ ಸುಮೈರಾ ಭಾರತಕ್ಕೆ ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News