ಚಿತ್ರಕಲಾ ಪರಿಷತ್ತು ಮಾಜಿ ಅಧ್ಯಕ್ಷ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

Update: 2019-06-09 14:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.9: ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ರಾಜ್ಯ ಸರಕಾರ ನೀಡಿದ್ದ ಅನುದಾನದಲ್ಲಿ 60.62 ಲಕ್ಷ ದುರ್ಬಳಕೆ ಮಾಡಿಕೊಂಡು ಆರ್ಥಿಕ ನಷ್ಟ ಉಂಟು ಮಾಡಿ ಸದಸ್ಯರನ್ನು ವಂಚಿಸಿದ ಆರೋಪದಡಿ ಪರಿಷತ್‌ನ ಹಿಂದಿನ ಅಧ್ಯಕ್ಷ ಸೇರಿದಂತೆ ನಾಲ್ವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅಂದಿನ ಅಧ್ಯಕ್ಷರೂ ಆಗಿದ್ದ ಹಾಲಿ ಉಪಾಧ್ಯಕ್ಷ ಟಿ.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಎಂ.ಜಿ. ಕಮಲಾಕ್ಷಿ, ಉಪಾಧ್ಯಕ್ಷ ಹರೀಶ್ ಪದ್ಮನಾಭ ಹಾಗೂ ಸಹಾಯಕ ಕಾರ್ಯದರ್ಶಿ ಕೆ.ಎಸ್.ಅಪ್ಪಾಜಯ್ಯ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಹಣ ದುರ್ಬಳಕೆ ಹಾಗೂ ವಂಚನೆ ಸಂಬಂಧ ಪರಿಷತ್‌ನ ಮಾಜಿ ನೌಕರ ಟಿ.ಎಂ.ವಿ.ಗೌಡ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ದುರ್ಬಳಕೆ?: 2007-2009 ಆರ್ಥಿಕ ವರ್ಷದಲ್ಲಿ ಅನುದಾನ ದುರ್ಬಳಕೆ ಆಗಿರುವುದಾಗಿ ಆರೋಪಿಸಿ ಕೆಲವು ಸದಸ್ಯರು ಸಂಘಗಳ ಜಿಲ್ಲಾ ನೋಂದಣಾಕಾರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಜಿಲ್ಲಾ ನೋಂದಣಾಕಾರಿಗಳ ನ್ಯಾಯಾಲಯ, ದುರ್ಬಳಕೆ ಆಗಿರುವ 60.62 ಲಕ್ಷವನ್ನು ಆರೋಪಿಗಳಿಂದ ವಸೂಲಿ ಮಾಡುವಂತೆ ಆದೇಶ ಹೊರಡಿಸಿತ್ತು.

ಅದೇ ಆದೇಶವನ್ನು ಆಧರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರುದಾರರು, ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News