ಮಾಧ್ಯಮಗಳು ಅನಾವಶ್ಯಕ ತೇಜೋವಧೆ ಮಾಡಿದರೆ ಕಾನೂನು ಕ್ರಮ ಅನಿವಾರ್ಯ: ಸಿಎಂ ಕುಮಾರಸ್ವಾಮಿ

Update: 2019-06-09 14:54 GMT

ಬೆಂಗಳೂರು, ಜೂ. 9: ‘ಸರಕಾರದ ಕುರಿತಾಗಲಿ, ನನ್ನ ನಡವಳಿಕೆಯ ಕುರಿತಾಗಲಿ ರಚನಾತ್ಮಕ ಟೀಕೆಗಳನ್ನು ಮಾಡಿದಾಗ ನಾನು ಅದನ್ನು ಸ್ಫೂರ್ತಿಯಿಂದ ಸ್ವೀಕರಿಸುವಷ್ಟು ಮುಕ್ತ ಮನೋಭಾವ ಹೊಂದಿದ್ದೇನೆ. ಆದರೆ ಮಾಧ್ಯಮಗಳು ಅನಾವಶ್ಯಕ ತೇಜೋವಧೆ ಮಾಡಿದಲ್ಲಿ ಕಾನೂನು ಕ್ರಮ ಅನಿವಾರ್ಯ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಸಂವಿಧಾನದತ್ತವಾದ ಮಾಧ್ಯಮ ಸ್ವಾತಂತ್ರ್ಯವನ್ನು ನಾನು ಖಂಡಿತಾ ಗೌರವಿಸುತ್ತೇನೆ. ಆದರೆ ರಾಜ್ಯಪಾಲರು, ಮುಖ್ಯಮಂತ್ರಿ ಹುದ್ದೆಯಂತಹ ಸಂವಿಧಾನಾತ್ಮಕ ಹುದ್ದೆಯನ್ನು ಅಗೌರವದಿಂದ ಕಾಣುವ ಸ್ವಾತಂತ್ರ್ಯ ಖಂಡಿತ ಇಲ್ಲ ಎನ್ನುವುದು ನನ್ನ ಸೀಮಿತ ತಿಳುವಳಿಕೆಯಲ್ಲಿರುವ ವಿಚಾರ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಶಾಶ್ವತ ಅಲ್ಲ ಎಂಬ ಅರಿವು ಕೂಡ ನನಗಿದೆ. ಒಬ್ಬ ವ್ಯಕ್ತಿಯ ದುರುದ್ದೇಶಪೂರಿತ ತೇಜೋವಧೆ ಮಾಡುವ ಅಧಿಕಾರವನ್ನಂತೂ ಸಂವಿಧಾನ ಮಾಧ್ಯಮಗಳಿಗೆ ನೀಡಿಲ್ಲ ಎಂದಿರುವ ಕುಮಾರಸ್ವಾಮಿ, ಹಿರಿಯ ಮುತ್ಸದ್ದಿ, ಮಾಜಿ ಸಿಎಂ ಹಾಗೂ ಕೇಂದ್ರದ ಮಾಜಿ ಸಚಿವ ಎಸ್ಸೆಂ ಕೃಷ್ಣ ಅವರು ಮಾಧ್ಯಮಗಳ ಸ್ವಾತಂತ್ರ್ಯದ ಕುರಿತು ನೀಡಿರುವ ಹೇಳಿಕೆಯನ್ನು ಗೌರವಿಸುತ್ತೇನೆ. ಆದರೆ, ಮಾಧ್ಯಮಗಳ ಸ್ವಾತಂತ್ರ್ಯದ ಹೆಸರಲ್ಲಿ ಸ್ವೇಚ್ಛಾಚಾರ ಮಾಡಲು ಅವಕಾಶವಿಲ್ಲ. ಕಾನೂನಿನ ಮುಂದೆ ಸಿಎಂ ಆಗಿರಲಿ, ಪತ್ರಕರ್ತರಾಗಿರಲಿ ಎಲ್ಲರೂ ಒಂದೇ. ಎಲ್ಲರೂ ತಲೆಬಾಗಲೇ ಬೇಕೆಂಬುದನ್ನೂ ಎಸ್ಸೆಂ ಕೃಷ್ಣರವರು ಸಂಬಂಧಿಸಿದ ಪತ್ರಕರ್ತರ ಗಮನಕ್ಕೂ ತರಲಿ ಎಂದು ಆಶಿಸುತ್ತೇನೆ ಎಂದು ಅವರು ಪ್ರಕಟನೆಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News