ಹೊಸ ತಲೆಮಾರಿಗೆ ಹತ್ತಿರವಾಗುವ ಸಾಹಿತ್ಯ ಅಗತ್ಯ: ಪ್ರೊ.ನಿಸಾರ್ ಅಹಮದ್

Update: 2019-06-09 15:04 GMT

ಬೆಂಗಳೂರು, ಜೂ.9: ಹೊಸ ತಲೆಮಾರಿಗೆ ಅಗತ್ಯವಾದ ವಿಷಯಗಳನ್ನಾಧರಿಸಿ ಸಾಹಿತ್ಯ ರಚಿಸಿದರೆ ಹೆಚ್ಚು ಯಶಸ್ಸು ಗಳಿಸಲು ಸಾಧ್ಯ ಎಂದು ಹಿರಿಯ ಸಾಹಿತಿ, ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಹೇಳಿದ್ದಾರೆ.

ರವಿವಾರ ನಗರದ ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದ ವತಿಯಿಂದ ಸಾವಣ್ಣ ಶತಕ ಸಂಭ್ರಮ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ತಕ್ಕಂತೆ ವಿಷ ಇಟ್ಟು ಸಾಹಿತ್ಯ ರಚನೆ ಮಾಡಿದರೆ ಯಶಸ್ಸು ಗಳಿಸುವುದು ಸುಲಭ ಎಂದರು.

ಆಕರ್ಷಕ ಸಾಹಿತ್ಯದ ಮೂಲಕ ಕೇವಲ ಹಣಗಳಿಸಬಹುದಷ್ಟೇ ಹೊರತು ಇದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಕವಿಯಾಗಲಿ, ಲೇಖಕನಾಗಲಿ ಸಮಾಜವನ್ನು ತನ್ನ ಲೇಖನದ ಮೂಲಕ ಸರಿದಾರಿಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಬೇರೆ ಬೇರೆ ಅಭಿರುಚಿ ಪುಸ್ತಕಗಳಲ್ಲೂ ಯುವ ಜನತೆಗೆ ಮನಮುಟ್ಟುವ ಸಂದೇಶ ಮಾನವೀಯ ಮೌಲ್ಯಗಳ ವಿಚಾರವಿರಲಿ ಎಂದು ಅಭಿಪ್ರಾಯಿಸಿದರು.

ಹಿಂದಿನ ದಿನಗಳಲ್ಲಿ ಸಾಂಪ್ರದಾಯಿಕ ಬರಹಗಳು ಮಾತ್ರ ಬರುತ್ತಿತ್ತು. ಆದರೆ, ಇದೀಗ ಬರವಣಿಗೆ ಶೈಲಿ ಬದಲಾಗಿದೆ. ಇಂದು ಸಾಂಪ್ರದಾಯಿಕ ವಿಚಾರಗಳನ್ನು ಎತ್ತಿ ತೋರಿಸುವ ಲೇಖನಗಳು ಕಡಿಮೆಯಾಗಿವೆ. ಟೆಕ್ಕಿಗಳು, ಸಾಫ್ಟ್‌ವೇರ್ ಎಂಜಿನಿಯರ್‌ಗಳು ಲೇಖಕರಾಗಿ ಹೊರಹೊಮ್ಮಿದ್ದಾರೆ. ಅವರು ತಮ್ಮ ಲೇಖನಗಳಿಗೆ ವಿಚಿತ್ರವಾದ ಶೀರ್ಷಿಕೆಗಳನ್ನು ಇಟ್ಟು ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಆ ಲೇಖನದಲ್ಲಿ ಯಾವುದೇ ಸತ್ವವಿರುವುದಿಲ್ಲ ಎಂದು ನುಡಿದರು.

ಪ್ರತಿಯೊಬ್ಬ ಲೇಖಕನ ಬರವಣೆಗೆ ಹಿಂದೆ ಒಂದು ಸಿದ್ದತೆ ಇರಬೇಕು. ಅಧ್ಯಯನ ಶೀಲತೆ ಇಂದಿನ ಲೇಖಕರಲ್ಲಿ ಬಿಟ್ಟುಹೋಗಿದೆ. ಯಾವುದೇ ಪ್ರಚಾರಕ್ಕಾಗಿ ಲೇಖನಗಳನ್ನು ಪ್ರಕಟಿಸುವುದಲ್ಲ. ಹಲವು ಲೇಖಕರು ತಮ್ಮ ಸ್ವಂತ ಅನುಭವನ್ನು ಬರೆಯುತ್ತಾರೆ. ಓದುಗನ ಮನಮುಟ್ಟುವಂಥಹ ಲೇಖನಗಳು ಬರಬೇಕಿದೆ. ಈ ನಿಟ್ಟಿನಲ್ಲಿ ಲೇಖಕರು ವಿದ್ವತ್‌ಪೂರ್ಣ ಕೃತಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ನಿಸಾರ್ ಅಹಮದ್ ಸಲಹೆ ನೀಡಿದರು.

ವೈನ್‌ ಶಾಪ್ ಹೆಚ್ಚು: ಬೆಂಗಳೂರು ವ್ಯಾಪ್ತಿಯಲ್ಲಿ 18 ಸಾವಿರ ವೈನ್ ಶಾಪ್(ಮದ್ಯದಂಗಡಿ) ಗಳಿವೆ.ಆದರೆ, ಪುಸ್ತಕ ಅಂಗಡಿಗಳ ಸಂಖ್ಯೆ ಚಿಕ್ಕದಾಗಿದೆ. ನಾವು ಪುಸ್ತಕ ಓದುವ ಮನಸ್ಸು ಗಳಿಗೆ ಪುಸ್ತಕ ತಲುಪಿಸಬೇಕು. ಆಗಷ್ಟೇ ಸಾಹಿತ್ಯ ಬೆಳವಣಿಗೆ ಆಗಲು ಸಾಧ್ಯ. ಲೇಖಕರನ್ನು ತಯಾರಿಸುವ ಕಾಯಕ ಆಗಬೇಕು. ಜೊತೆಗೆ, ಪುಸ್ತಕ ಮಾರಾಟ ಹೊಸತನವನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೋಗಿಯ ‘ಎಲ್ ’ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪತ್ರಕರ್ತರಾದ ವಿಶ್ವೇಶ್ವರ ಭಟ್, ರವಿ ಹೆಗಡೆ, ಶ್ರೀವತ್ಸ ನಾಡಿಗ್, ಲೇಖಕರಾದ ಸುರೇಶ್ ಪದ್ಮನಾಭನ್, ಜೋಗಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News