ಸಂಪುಟ ವಿಸ್ತರಣೆಯೇ ಮೈತ್ರಿ ಸರಕಾರ ಬೀಳಲು ಅಡಿಗಲ್ಲು: ಕೇಂದ್ರ ಸಚಿವ ಸದಾನಂದಗೌಡ

Update: 2019-06-09 16:46 GMT

ಬೆಂಗಳೂರು, ಜೂ. 9: ‘ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಯೇ ಈ ಸರಕಾರ ಬೀಳಲು ಅಡಿಗಲ್ಲು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಭವಿಷ್ಯ ನುಡಿದಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಮುಖಂಡರ ನಡುವಿನ ಅಂತರೀಕ ಜಗಳವೇ ಮೈತ್ರಿ ಸರಕಾರ ಉಳಿಸಲು ಹೋಗುವ ಸಾಹಸವೇ ಅವರನ್ನು ಮುಳುಗಿಸಲಿದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು.

ರಾಜ್ಯದಲ್ಲಿ ಒಂದು ಕಡೆ ಭೀಕರ ಸ್ವರೂಪದ ಬರ ಆವರಿಸಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಇಲ್ಲ. ಇದು ಕ್ಷೇತ್ರ ಪರ್ಯಟನೆ ವೇಳೆ ಅರಿವಾಗುತ್ತದೆ. ರಾಜ್ಯ ಸರಕಾರ ಈ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಇವರಿಂದಾಗಿ ಬಡವರ ಜೀವನ ದುಸ್ತರವಾಗುತ್ತಿದೆ ಎಂದು ಡಿವಿಎಸ್ ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಇದ್ದಾರೋ ಅಥವಾ ಅವರು ತಮ್ಮ ಮನೆಯಲ್ಲಿ ಕುಳಿತ್ತಿದ್ದಾರೋ ಗೊತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜನತೆ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಸದಾನಂದಗೌಡ ಇದೇ ವೇಳೆ ಟೀಕಿಸಿದರು.

ರಾಜಕೀಯದಲ್ಲಿ ಇಲ್ಲದಿದ್ದರೂ ಮಂಡ್ಯ ಸಂಸದೆ ಸುಮಲತಾ ಅವರ ಪ್ರಬುದ್ಧತೆಯನ್ನು ನೋಡಿ ಜೆಡಿಎಸ್ ಮುಖಂಡರು ಕಲಿಯಬೇಕಿದೆ. ಯಾವ ಪಕ್ಷಕ್ಕೂ ಸೇರಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ. ಜನತೆ ಕಪಾಳ ಮೋಕ್ಷ ಮಾಡಿದರೂ ಜೆಡಿಎಸ್ ನವರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಲೇವಡಿ ಮಾಡಿದರು.

ನಿಖಿಲ್ ಕುಮಾರಸ್ವಾಮಿ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ನಿಖಿಲ್ ಇಷ್ಟು ದೊಡ್ಡ ರಾಜಕಾರಣಿ ಆದರಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದವರು ನಿಖಿಲ್. ಸಿನಿಮಾದಲ್ಲಿ ರಾಜಕಾರಣ ಮಾಡಿರಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎಷ್ಟರ ಮಟ್ಟಿಗೆ ಹೊಲಸಾಗಿದೆ ಎಂಬುದಕ್ಕೆ ನಿಖಿಲ್ ಹೇಳಿಕೆ ಸಾಕ್ಷಿ. ಸಿನಿಮಾ ರಂಗದಿಂದ ಬಂದವರ ಬಾಯಲ್ಲಿ ಈ ಮಾತು ಬರುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡುತ್ತಾರೆ ಎಂದು ಡಿವಿಎಸ್ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News