ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಬೈಯಪ್ಪನಹಳ್ಳಿ ಚಿತಾಗಾರದಲ್ಲಿ ಗಿರೀಶ್ ಕಾರ್ನಾಡ್ ಅಂತ್ಯಕ್ರಿಯೆ

Update: 2019-06-10 12:29 GMT

ಬೆಂಗಳೂರು ಜೂ.10: ಇಂದು ಮುಂಜಾನೆ ನಿಧನರಾದ ಹಿರಿಯ ನಾಟಕಕಾರ, ನಟ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಂಬಿದ್ದ ಚಿಂತನೆಗಳ ಆಶಯದಂತೆ ಯಾವುದೆ ಸಂಪ್ರದಾಯವಿಲ್ಲದೆ, ಸರಕಾರಿ ಗೌರವಗಳಿಲ್ಲದೆ ಸರಳವಾಗಿ ಅಂತ್ಯಕ್ರಿಯೆ ನಡೆಸಲಾಯಿತು.

ಅವರು ಸಾವನ್ನಪ್ಪುವ ಮುನ್ನ ತಮ್ಮ ಕುಟುಂಬಸ್ಥರಲ್ಲಿ ನನ್ನ ಅಂತ್ಯ ಸಂಸ್ಕಾರವನ್ನು ಯಾವುದೆ ಸಂಪ್ರದಾಯ, ಆಡಂಬರ ಇಲ್ಲದಂತೆ ಸರಳವಾಗಿ ನಡೆಸಬೇಕೆಂದು ಅನಿಸಿಕೆಯನ್ನು ಹಂಚಿಕೊಂಡಿದ್ದರು. ಅದರಂತೆ ನಗರದ ಬೈಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲ್ಲಿ ಚಿತಾಗಾರದಲ್ಲಿ ಮಧ್ಯಾಹ್ನ 2ರ ಸುಮಾರಿನಲ್ಲಿ ಸರಳವಾಗಿ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಅವರ ಕುಟುಂಬದ ಸಮೀಪದ ಸಂಬಂಧಿಕರು, ವೃತ್ತಿ ಬದುಕಿನ ಗೆಳೆಯರು, ಸಾಹಿತಿಗಳು ಸೇರಿದಂತೆ ಬೆರಳೆಣಿಕೆಯ ಮಂದಿ ಭಾಗವಹಿಸಿದ್ದರು.

ಇದಕ್ಕೂ ಮೊದಲು ಗಿರೀಶ್ ಕಾರ್ನಾಡ್‌ರವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಗರದ ಲ್ಯಾವಲ್ಲೆ ರಸ್ತೆಯಲ್ಲಿರುವ ಅವರ ನಿವಾಸದತ್ತ ಕಲಾವಿದರು, ಸಾಹಿತಿಗಳು ಧಾವಿಸಲು ಪ್ರಾರಂಭಿಸಿದರು. ಹಾಗೂ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಡಬೇಕೆಂದು ಕಲಾವಿದರು, ಅಭಿಮಾನಿಗಳಿಂದ ಒತ್ತಾಯ ಕೇಳಿಬಂದಿತ್ತು.

ಕಾರ್ನಾಡರ ಅಂತಿಮ ಸಂಸ್ಕಾರಕ್ಕೆ ಸಂಬಂಧಪಟ್ಟಂತೆ ಯಾವುದೇ ಧಾರ್ಮಿಕ ವಿಧಿವಿಧಾನಗಳೂ ಇಲ್ಲ. ಯಾವುದೇ ಧರ್ಮ, ಜಾತಿಯ ಪದ್ಧತಿಯಂತೆ ನಡೆಯುವುದಿಲ್ಲ. ಸರಕಾರಿ ಗೌರವ ಸಲ್ಲಿಸುವುದೂ ಇಲ್ಲ. ಹಾಗೇ ಸಾರ್ವಜನಿಕ ದರ್ಶನದ ವ್ಯವಸ್ಥೆ ಇಲ್ಲ ಎಂದು ಕಾರ್ನಾಡ್ ಅವರ ಪುತ್ರ ರಘು ಕಾರ್ನಾಡ್ ಹಾಗೂ ಶಿಷ್ಯ, ಚಿತ್ರನಿರ್ದೇಶಕ ಕೆ.ಎಂ.ಚೈತನ್ಯ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಚಿತಾಗಾರದ ಬಳಿ ಅಂತಿಮ ದರ್ಶನ: ಗಿರೀಶ್ ಕಾರ್ನಾಡ್‌ರವರ ಪಾರ್ಥಿವ ಶರೀರವನ್ನು ನೋಡಲು ಅವರ ನಿವಾಸದಲ್ಲಿ ಅವಕಾಶ ಕಲ್ಪಿಸಲಾಗಲಿಲ್ಲ. ಆದರೆ, ಅಂತ್ಯಕ್ರಿಯೆ ನಡೆಯುವ ಮುನ್ನ ಚಿತಾಗಾರದ ಬಳಿ ಕೆಲವೊತ್ತು ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಸಚಿವ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಮೇಯರ್ ಗಂಗಾಂಬಿಕೆ, ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಶಾಸಕ ಎನ್.ಎ.ಹಾರೀಸ್, ಕಲಾವಿದರು, ಸಾಹಿತಿಗಳು ಹಾಗೂ ಕುಟುಂಬದ ಸದಸ್ಯರು ಅಂತಿಮ ದರ್ಶನ ಪಡೆದರು.

ಸಾಹಿತಿ ಗಿರೀಶ್ ಕಾರ್ನಾಡ್‌ರವರ ಅಂತ್ಯ ಸಂಸ್ಕಾರವನ್ನು ಯಾವುದೆ ಸರಕಾರಿ ಗೌರವಗಳಿಲ್ಲದೆ ಸರಳವಾಗಿ ನಡೆದಿರುವುದಕ್ಕೆ ಹಿರಿಯ ನಟ ಅನಂತ್‌ನಾಗ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ಧಪ್ಪ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಸೇರಿದಂತೆ ಕಲಾವಿದರು, ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

3ದಿನ ಶೋಕಾಚರಣೆ: ಇತ್ತ ಗಿರೀಶ್ ಕಾರ್ನಾಡ್‌ರವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಕಚೇರಿ ವತಿಯಿಂದ ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಿಗೆ ಒಂದು ದಿನದ ರಜೆ ಹಾಗೂ ಮೂರು ದಿನದ ಶೋಕಾಚರಣೆಗೆ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News