ಇಲ್ಲಿದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರ ಪರಿಚಯ, ವಿವಾದಗಳು

Update: 2019-06-10 15:46 GMT

ಕಾರ್ನಾಡರ ಪರಿಚಯ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಅಂತರ್‌ರಾಷ್ಟ್ರೀಯ ನಾಟಕಕಾರ ಗಿರೀಶ್ ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಮುಗಿಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್‌ಸಿಪ್ ಪಡೆದು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ, ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು.

ಅವರ ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡಿತಿ, ಉತ್ಸವ್ ಮುಂತಾದ ಸಿನಿಮಾಗಳು ಹಾಗೂ ಸೂಫಿ ಪಂಥ, ಕನಕಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಟಕ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು. ಹಾಗಾಗಿ ಅವರಿಗೆ ಸಂದ ಈ ಗೌರವ ಕಾರ್ನಾಡರಿಗೆ ಮಾತ್ರವಾಗಿರದೆ ಅದು ಇಡೀ ಭಾರತೀಯ ರಂಗಭೂಮಿಗೆ ಬಂದ ಗೌರವವೆಂದು ಪರಿಗಣಿತವಾಯಿತು. ಅವರ ಮತ್ತೊಂದು ವಿಶೇಷತೆ ಏನೆಂದರೆ, ಅವರಿಗೆ ಜ್ಞಾನಪೀಠ ಪ್ರಶಸ್ತಿ ಬರುವ ಮೊದಲೆ, ಅವರ ಕೃತಿಗಳು ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿ, ಆ ಭಾಷೆಗಳಲ್ಲಿ ಪ್ರಯೋಗವೂ ಆಗಿ ಯಶಸ್ವಿಯಾಗಿದ್ದವು.

ಅವರ ತುಘಲಕ್ ವಿದೇಶಗಳಲ್ಲಿ ಹೆಚ್ಚು ಪ್ರದರ್ಶನ ಕಂಡಿದ್ದು, ಹಯವದನ ನಾಟಕವು ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಅಲ್ಲಿನವರಿಂದಲೇ ಪ್ರಯೋಗಗೊಂಡಿತ್ತು. ನಾಗಮಂಡಲವನ್ನು ಅಮೆರಿಕದ ಗಥ್ರಿ ಥಿಯೇಟರಿನವರು ಪ್ರದರ್ಶಿಸಿದರು. ಹೀಗೆ ಜ್ಞಾನಪೀಠ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು.

ಕಾರ್ನಾಡರ ವಿವಾದಗಳು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡರ ಜನಪರವಾದ ಹೇಳಿಕೆಗಳಿಗೆ ಬಲಪಂಥೀಯರಿಂದ ನಿರಂತರವಾಗಿ ಕಟು ಟೀಕೆಯನ್ನು ಎದುರಿಸುತ್ತಾ ಬಂದಿದ್ದಾರೆ. ಅಪ್ರತಿಮ ದೇಶಭಕ್ತನಾಗಿ, ಜನಪರವಾದ ಆಡಳಿತ ನಡೆಸಿದ್ದ ಟಿಪ್ಪು ಸುಲ್ತಾನ್ ಅವರನ್ನು ಸಂಘಪರಿವಾರದ ಸಂಘಟನೆಗಳು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಿದಾಗ, ಟಿಪ್ಪು ಸುಲ್ತಾನ್ ಕಂಡ ಕನಸುಗಳು ಎಂಬ ನಾಟಕವನ್ನು ರಚಿಸಿ ಕೋಮುವಾದಿಗಳ ಟೀಕೆಯನ್ನು ಎದುರಿಸಬೇಕಾಯಿತು. ಆದರೂ, ಟಿಪ್ಪು ಸುಲ್ತಾನ್ ಪರವಾಗಿ ಮಾತನಾಡುವುದನ್ನು ಕೊನೆವರೆಗೂ ಬಿಡಲಿಲ್ಲ. ನಾಡಪ್ರಭು ಕೆಂಪೇಗೌಡ ಸೇನಾನಿ ಅಲ್ಲ. ಹೀಗಾಗಿ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲಿಗೆ, ಟಿಪ್ಪು ಸುಲ್ತಾನ್ ಹೆಸರು ಇಡುವುದು ಸೂಕ್ತವೆಂದು ಗಿರೀಶ್‌ಕಾರ್ನಾಡ್ ಅಭಿಪ್ರಾಯಿಸಿದ್ದರು. ಇದರಿಂದ ರಾಜ್ಯದ ಕನ್ನಡಪರ ಸಂಘಟನೆಗಳು, ಬಿಜೆಪಿಯ ಕಟು ಟೀಕಿಗೆ ಗುರಿಯಾಗಬೇಕಾಯಿತು. ನಂತರ ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆ ಕೋರಿದರು.

ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯೊದಗಿದೆ, ಉಸಿರು ಕಟ್ಟುವ ವಾತಾವರಣವಿದೆ ಎಂದು ಕೆಲವು ಲೇಖಕರು ಪ್ರಶಸ್ತಿಗಳನ್ನು ವಾಪಸ್ ಮಾಡಿದಾಗ, ಗಿರೀಶ್ ಕಾರ್ನಾಡ್ ಅವರ ಪರವಾಗಿ, ಮೋದಿಯವರ ಅಸಹಿಷ್ಣುತೆಯ ವಿರುದ್ಧ ದನಿ ಎತ್ತಿ ವಿವಾದಕ್ಕೆ ಗುರಿಯಾಗಿದ್ದರು. ಸರಕಾರ ಹೊಸ ತಿದ್ದುಪಡಿ ಮೂಲಕ ಜಾರಿಗೆ ತರಲು ಉದ್ದೇಶಿಸಿದ್ದ ಗೋ ಹತ್ಯೆ ನಿಷೇದ ಕಾಯ್ದೆಯ ವಿರುದ್ದ ಪುರಭವನದಲ್ಲಿ ದಲಿತ, ಅಲ್ಪಸಂಖ್ಯಾತ ಸಂಘಟನೆಗಳು ಆಯೋಜಿಸಿದ್ದ ನನ್ನ ಆಹಾರ ನನ್ನ ಹಕ್ಕು ಪ್ರತಿಭಟನೆಯಲ್ಲಿ ಭಾಗವಹಿಸಿ, ತಿನ್ನುವ ಆಹಾರದ ಮೇಲೆ ಹಕ್ಕು ಸಾಧಿಸಲು ಯಾರಿಗೂ ಅವಕಾಶವಿಲ್ಲವೆಂದು ಗುಡುಗಿದ್ದರು. ಇದು ಸಹ ಹಿಂದೂ ಮೂಲಭೂತವಾದಿಗಳ ಟೀಕೆಗೆ ಕಾರಣವಾಯಿತು. ಈ ವಿಷಯವನ್ನು ಮುಂದಿಟ್ಟುಕೊಂಡು ಆರೆಸ್ಸೆಸ್ ನಿರಂತರವಾಗಿ ಅವರನ್ನು ತೆಗಳುತ್ತಾ ಬಂದಿದೆ. ಹಾಗೆಯೆ ಅರ್ಬನ್ ನಕ್ಸಲ್ ವಿಷಯದಲ್ಲಿ ‘ನಾನು ಕೂಡ ಅರ್ಬಲ್ ನಕ್ಸಲ್’ ಎಂಬ ನಾಮಫಲಕವನ್ನು ಕತ್ತಿಗೆ ಹಾಕಿಕೊಂಡು ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ನಡೆಸಿದರು. ಇದನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಚರ್ಚೆಯ ವಿಷಯವಾಗಿ ತೆಗೆದುಕೊಂಡು ಗಿರೀಶ್ ಕಾರ್ನಾಡರನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಆದರೂ ಅವರು ತಮ್ಮ ನಿಲುವಿಗೆ ಬದ್ದರಾಗಿದ್ದರು. ಹೀಗೆ ಅವರು ತಮ್ಮ ಬದುಕಿನುದ್ದಕ್ಕೂ ಕೋಮುವಾದದ ವಿರುದ್ಧ ನಿರಂತರವಾದ ಹೋರಾಟದಲ್ಲಿ ತೊಡಗಿದ್ದರು.

ಕಾರ್ನಾಡರ ಸಿನೆಮಾ ಸಾಂಗತ್ಯ

ನಾಟಕಕಾರರಾಗಿ, ಸಾಹಿತ್ಯಕಾರರಾಗಿ ಅಷ್ಟೇ ಅಲ್ಲದೆ ಗಿರೀಶ್ ಕಾರ್ನಾಡರು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ನಟರಾಗಿ, ನಿರ್ದೇಶಕರಾಗಿ ಚಲನಚಿತ್ರ ರಂಗದಲ್ಲೂ ಖ್ಯಾತಿ ಪಡೆದಿದ್ದಾರೆ. 1970 ರಲ್ಲಿ ತೆರೆಕಂಡ ಯು.ಆರ್.ಅನಂತಮೂರ್ತಿ ಕಾದಂಬರಿ ಆಧಾರಿತ ‘ಸಂಸ್ಕಾರ’ ಚಿತ್ರದ ಮೂಲಕ ನಟನೆಗೆ ಪಾರ್ದಾಪಣೆ ಮಾಡಿದ ಅವರು, ಆ ಚಿತ್ರದಲ್ಲಿನ ಪ್ರಾಣೇಶಾಚಾರ್ಯ ಪಾತ್ರವನ್ನು ತುಂಬಾ ಪ್ರಬುದ್ಧರಾಗಿ ನಿಭಾಯಿಸಿದರು. ಈ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಲ್ಲದೆ, ಆ ಚಿತ್ರದ ಎಲ್ಲಾ ವಿಭಾಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು, ಸಿನೆಮಾ ಮಾಧ್ಯಮದನ್ನು ಅರಗಿಸಿಕೊಂಡರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲವನ್ನು ತಂದು ಕೊಟ್ಟ ಚಿತ್ರವಾಗಿದೆ. ನಂತರ ಎಸ್.ಎಲ್.ಭೈರಪ್ಪಅವರ ಕಾದಂಬರಿ ಆಧಾರಿತ ‘ವಂಶವೃಕ್ಷ’ವನ್ನು ತೆರೆಗೆ ತರುವ ಮೂಲಕ ಚಿತ್ರ ನಿರ್ದೇಶನಕ್ಕೂ ಕಾಲಿಟ್ಟರು. ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ ಚಿತ್ರವನ್ನು ಬಿ.ವಿ.ಕಾರಂತರೊಡನೆ ನಿರ್ದೇಶನ ಮಾಡಿದರು. ಕಾಡು, ಒಂದಾನೊಂದು ಕಾಲದಲ್ಲಿ ಚಿತ್ರಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿ, ಹಿಂದಿಯಲ್ಲಿ ಉತ್ಸವ್, ಗೋಧೂಳಿ ನಿರ್ದೇಶನ ಮಾಡಿದರು. ಒಂದಾನೊಂದು ಕಾಲದಲ್ಲಿ ಚಿತ್ರವನ್ನು 1977ರಲ್ಲಿ ನಿರ್ದೇಶಿಸುವಾಗ ಕಳರಿಪಯಟ್ಟು ಮತ್ತು ಮುಂತಾದ ಸಾಹಸಕಲೆಗಳನ್ನು ಮೊದಲ ಬಾರಿ ಕನ್ನಡ ತೆರೆಯಲ್ಲಿ ಅಳವಡಿಸಿದ ಹಿರಿಮೆ ಕಾರ್ನಾಡರದ್ದು.

ನಿರ್ದೇಶನದ ಜೊತೆಗೆ ಹಿಂದಿಯ ನಿಶಾಂತ್, ಕನ್ನಡದ ಮೈಸೂರು ಮಲ್ಲಿಗೆ, ಶಿಶುನಾಳ ಷರೀಫ್ ಮುಂತಾದ ಚಿತ್ರಗಳಲ್ಲೂ ನಟಸಿದರು. ಕನಕ-ಪುರಂದರ, ದ.ರಾ.ಬೇಂದ್ರೆ, ಸೂಫಿಪಂಥ ಸಾಕ್ಷ್ಯಚಿತ್ರಗಳನ್ನೂ ಮಾಡಿದ್ದಾರೆ. ’ಚೆಲುವಿ’ ಪರಿಸರ ವಿನಾಶ ಕುರಿತ ಕಿರುಚಿತ್ರ ಹಾಗೂ ದ.ರಾ.ಬೇಂದ್ರ ಕುರಿತ ಸಾಕ್ಷಾಚಿತ್ರವನ್ನೂ ಮಾಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ ಕಾನೂರು ಹೆಗ್ಗಡಿತಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು. ಅನಂತರ ಹಲವಾರು ಚಿತ್ರಗಳನ್ನು ಮತ್ತು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ತಮ್ಮ ನಟನೆಯಿಂದಲೂ ಪ್ರಸಿದ್ಧರಾಗಿರುವ ಕಾರ್ನಾಡರು ಹಲವು ಕನ್ನಡ, ತೆಲಗು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ ಶಂಕರ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿದ್ದಾರೆ.

ರುದ್ರ ತಾಂಡವ, ಧೀರ ರಣವಿಕ್ರಮ, ಸವಾರಿ 2, ಕಾನೂರು ಹೆಗ್ಗಡಿತಿ, ಪ್ರತ್ಯರ್ಥ, ಚೈನಾ ಗೇಟ್, ಮಿನ್ಸಾರ ಕನವುಗಳ್, ಆತಂಕ್, ಆಘಾತ, ಕಾದಲನ್, ಪೂರ್ಣ ಸತ್ಯ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಷರೀಫ, ಪ್ರಥಮ ಉಷಾಕಿರಣ, ಕಾಡಿನ ಬೆಂಕಿ, ಸೂತ್ರಧಾರ, ನೀ ತಂದ ಕಾಣಿಕೆ, ಆನಂದ ಭೈರವಿ, ಟೈಗರ್ ಜಿಂದ ಹೈ, ಶಿವಾಯ್, ಏಕ್ತಾ ಟೈಗರ್, ಎಕೆ 47 ಸೇರಿದಂತೆ ಹಲವು ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟಿವೆ. 2007ರಲ್ಲಿ ತೆರೆಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶ್ರೀಧರ್ ಅವರ ಜೊತೆಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಭಾಷೆಯ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಹತ್ತು ರಾಷ್ಟ್ರ ಪ್ರಶಸ್ತಿ, ಆರು ರಾಜ್ಯ ಪ್ರಶಸ್ತಿ, ಹಾಗೂ ಏಳು ಚಲನಚಿತ್ರೋತ್ಸವ ಪ್ರಶಸ್ತಿಗಳ ಗೌರವಕ್ಕೆ ಭಾಜನರಾಗಿದ್ದಾರೆ ಗಿರೀಶ್ ಕಾರ್ನಾಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News